ಅಮೃತಸರ: ಉನ್ನತ ಶಿಕ್ಷಣಕ್ಕಾಗಿ ದೂರದ ನಗರಕ್ಕೆ ಮಕ್ಕಳನ್ನು ಕಳುಹಿಸುವ ಪೋಷಕರು ಅವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಆ ನಂಬಿಕೆಗೆ ದೊಡ್ಡ ಆಘಾತ ನೀಡುತ್ತವೆ. ಪಂಜಾಬ್‌ನ ಅಮೃತಸರ ಮೂಲದ 18 ವರ್ಷದ ಯುವತಿಯೊಬ್ಬಳ ಜನ್ಮದಿನದಂದು ನಡೆದ ಘಟನೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಯುವತಿ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (LPU)ಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆಯ ಜನ್ಮದಿನದ ಪ್ರಯುಕ್ತ ಪೋಷಕರು ಹಾಗೂ ಸಹೋದರ ಯಾವುದೇ ಮುನ್ಸೂಚನೆ ನೀಡದೆ ಸರ್‌ಪ್ರೈಸ್ ನೀಡಲು ನೇರವಾಗಿ ಆಕೆಯ ವಸತಿ ಕೋಣೆಗೆ ತೆರಳಿದ್ದರು.

ರೂಮ್‌ಗೆ ತಲುಪಿದ ಬಳಿಕ ಹಲವು ಬಾರಿ ಬಾಗಿಲು ತಟ್ಟಿದರೂ ಸುಮಾರು 15 ನಿಮಿಷಗಳ ಕಾಲ ಬಾಗಿಲು ತೆರೆಯಲಿಲ್ಲ. ಕೊನೆಗೆ ಬಾಗಿಲು ತೆರೆದ ಯುವತಿ, ತಾನು ಒಳಗೆ ಕುಳಿತು ಓದುತ್ತಿದ್ದೆ ಎಂದು ಹೇಳಿದ್ದಾಳೆ.

ಇದೇ ವೇಳೆ ಅಲ್ಲಿಗೆ ಬಂದ ಸ್ಥಳೀಯ ನಿವಾಸಿಯೊಬ್ಬರು, “ನಿಮ್ಮ ರೂಮ್ ಹಿಂಭಾಗದ ಕಿಟಕಿಯಿಂದ ಒಬ್ಬ ಯುವಕ ಕೆಳಗೆ ಜಿಗಿದಿದ್ದಾನೆ. ಅವನ ತಲೆಗೆ ಗಾಯವಾಗಿ ರಕ್ತ ಹರಿಯುತ್ತಿದೆ” ಎಂದು ತಿಳಿಸಿದ್ದಾನೆ. ಈ ಮಾತು ಕೇಳುತ್ತಿದ್ದಂತೆಯೇ ಪೋಷಕರು ಬೆಚ್ಚಿಬಿದ್ದಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದಾಗ, “ನನಗೆ ಏನೂ ಗೊತ್ತಿಲ್ಲ. ನಾನು ನನ್ನ ಕೋಣೆಯಲ್ಲೇ ಓದುತ್ತಿದ್ದೆ,” ಎಂದು ಯುವತಿ ಉತ್ತರಿಸಿದ್ದಾಳೆ ಎಂದು ವರದಿಯಾಗಿದೆ.

ಮಗಳ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಿಸಲು ಕೇಕ್ ಹಿಡಿದು ಬಂದಿದ್ದ ಪೋಷಕರಿಗೆ, ಎದುರಾದ ಈ ಅನಿರೀಕ್ಷಿತ ಬೆಳವಣಿಗೆ ಭಾರೀ ಆಘಾತ ಉಂಟುಮಾಡಿದೆ. ಸಂತಸದ ಕ್ಷಣವೇ ಕೆಲವೇ ನಿಮಿಷಗಳಲ್ಲಿ ಆತಂಕ ಮತ್ತು ಗೊಂದಲಕ್ಕೆ ತಿರುಗಿದ ಘಟನೆ ಇದು.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಕಾರಣವಾಗಿದ್ದು, ಮಕ್ಕಳ ಮೇಲೆ ನಂಬಿಕೆ ಇಟ್ಟಿರುವ ಪೋಷಕರಿಗೆ ಎಚ್ಚರಿಕೆಯ ಸಂದೇಶವಾಗಿ ಪರಿಣಮಿಸಿದೆ.

Related News

error: Content is protected !!