
ಮಂಡ್ಯ: ಸಾಲವಾಗಿ ನೀಡಿದ್ದ ಹಣವನ್ನು ಮರಳಿ ಕೇಳಿದ್ದಕ್ಕೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ವಿವಾಹಿತೆಯ ಮಾನಸಿಕ ಕಿರುಕುಳದಿಂದ ಮನನೊಂದ 24 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಗಂಜಿಗೆರೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಗಂಜಿಗೆರೆ ಕೊಪ್ಪಲು ಗ್ರಾಮದ ಹರೀಶ್ (24) ಎಂದು ಗುರುತಿಸಲಾಗಿದೆ. ಈ ಸಾವಿಗೆ ಅದೇ ಗ್ರಾಮದ ಇಬ್ಬರು ಮಕ್ಕಳ ತಾಯಿ ದೀಪಿಕಾ ಎಂಬುವರ ನಿರಂತರ ಕಿರುಕುಳವೇ ಕಾರಣ ಎಂದು ಹರೀಶ್ ಅವರ ಪೋಷಕರು ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.
ಏನಿದು ಪ್ರಕರಣ?
ಕುಟುಂಬಸ್ಥರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಹರೀಶ್ ಮತ್ತು ದೀಪಿಕಾ ನಡುವೆ ಕಳೆದ ನಾಲ್ಕು ವರ್ಷಗಳಿಂದ ಪರಿಚಯವಿತ್ತು. ಈ ಪರಿಚಯದ ಹಿನ್ನೆಲೆಯಲ್ಲಿ ದೀಪಿಕಾ, ಹರೀಶ್ ಅವರಿಂದ ಸುಮಾರು ₹5 ಲಕ್ಷವನ್ನು ಸಾಲವಾಗಿ ಪಡೆದಿದ್ದಳು ಎನ್ನಲಾಗಿದೆ.
ಕೆಲವು ದಿನಗಳ ನಂತರ ಹರೀಶ್ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ, ಹಣ ನೀಡುವುದನ್ನು ತಪ್ಪಿಸಲು ದೀಪಿಕಾ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾನಸಿಕ ಒತ್ತಡದಿಂದ ಆತ್ಮಹತ್ಯೆ?
ಈ ಬೆದರಿಕೆಗಳಿಂದ ತೀವ್ರ ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ಒಳಗಾದ ಹರೀಶ್, ಸಮಾಜದಲ್ಲಿ ಅಪಮಾನವಾಗುವ ಭಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಸಂಬಂಧಿತ ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆರೋಪಗಳು ಸೇರಿದಂತೆ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






