ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಮಹಿಳೆಯೊಬ್ಬಳು ತನ್ನ ಪ್ರೇಮಿಯ ಮರ್ಮಾಂಗವನ್ನು ಕತ್ತರಿಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಸ್ಥಳೀಯರಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆಟೋ ಚಾಲಕ ಸುರೇಶ್ ಎಂಬಾತ ಕಳೆದ ಐದು ವರ್ಷಗಳಿಂದ ಸ್ಥಳೀಯ ಡ್ರೈವರ್ಸ್ ಕಾಲೋನಿಯಲ್ಲಿ ವಾಸವಿರುವ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ, ಕಳೆದ ಕೆಲ ತಿಂಗಳುಗಳಿಂದ ಆತನ ವರ್ತನೆ ಮಹಿಳೆಯ 17 ವರ್ಷದ ಅಪ್ರಾಪ್ತ ಮಗಳ ಕಡೆಗೂ ತಿರುಗಿತ್ತು ಎನ್ನಲಾಗಿದೆ. ಈ ಬಗ್ಗೆ ಬಾಲಕಿ ಹಲವು ಬಾರಿ ತಾಯಿಗೆ ದೂರು ನೀಡಿದ್ದಳು. ಇದರಿಂದ ಆಕ್ರೋಶಗೊಂಡ ಮಹಿಳೆ, ತನ್ನ ಮಗಳ ಬಳಿ ಸುಳಿಯದಂತೆ ಸುರೇಶ್‌ಗೆ ಎಚ್ಚರಿಕೆ ನೀಡಿದ್ದರೂ ಆತ ಅದನ್ನು ಲೆಕ್ಕಿಸಿರಲಿಲ್ಲ ಎಂದು ಹೇಳಲಾಗಿದೆ.

ಘಟನೆ ನಡೆದ ರಾತ್ರಿ ಎಂದಿನಂತೆ ಸುರೇಶ್ ಮಹಿಳೆಯ ಮನೆಗೆ ಬಂದಿದ್ದನು. ಮಧ್ಯರಾತ್ರಿ ಮಹಿಳೆ ಶೌಚಾಲಯಕ್ಕೆ ತೆರಳಿದ್ದ ವೇಳೆ, ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಭಯಗೊಂಡ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದು, ಸದ್ದು ಕೇಳಿ ಓಡಿಬಂದ ತಾಯಿ ಪ್ರಿಯಕರನನ್ನು ತಡೆಯಲು ಮುಂದಾಗಿದ್ದಾಳೆ. ಆದರೆ ಆತ ಹಿಂದೆ ಸರಿಯದ ಹಿನ್ನೆಲೆಯಲ್ಲಿ ಕೋಪಗೊಂಡ ಮಹಿಳೆ ಚಾಕುವಿನಿಂದ ಆತನ ಮರ್ಮಾಂಗಕ್ಕೆ ಇರಿದಿದ್ದಾಳೆ.

ತೀವ್ರವಾಗಿ ಗಾಯಗೊಂಡ ಸುರೇಶ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!