ಪ್ರೀತಿಯ ಸಂಬಂಧಕ್ಕಾಗಿ ಪತಿಯನ್ನೇ ಸೈನೈಡ್ ನೀಡಿ ಹತ್ಯೆಗೈದು, ಬಳಿಕ ಆತ ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದಾನೆ ಎಂದು ಬರೋಬ್ಬರಿ ಎರಡು ವರ್ಷಗಳ ಕಾಲ ಕುಟುಂಬಸ್ಥರನ್ನು ನಂಬಿಸಿದ್ದ ಮಹಿಳೆಯ ಭೀಕರ ಕೃತ್ಯ ಗುಜರಾತ್‌ನ ಜಾಮ್‌ನಗರದಲ್ಲಿ ಬೆಳಕಿಗೆ ಬಂದಿದೆ. ಪ್ರಿಯಕರನೊಂದಿಗೆ ಸೇರಿ ಕೊಲೆ ನಡೆಸಿ, ಮೃತದೇಹವನ್ನು 12 ಅಡಿ ಆಳದ ಗುಂಡಿಯಲ್ಲಿ ಹೂತು ಹಾಕಿದ್ದ ಆರೋಪದ ಮೇಲೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಜಿಗ್ನೇಶ್ ಎಂಬ ವ್ಯಕ್ತಿ ಏಕಾಏಕಿ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಆತ ಎಲ್ಲಿದ್ದಾನೆ ಎಂದು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ವೇಳೆ ಪತ್ನಿ ಪೃಥ್ವಿ, “ಜಿಗ್ನೇಶ್ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಕಂಪನಿಯ ಕಟ್ಟುನಿಟ್ಟಿನ ನಿಯಮಗಳಿಂದ ಯಾರೊಂದಿಗೂ ಫೋನ್‌ನಲ್ಲಿ ಮಾತನಾಡಲು ಸಾಧ್ಯವಿಲ್ಲ. ಪರ್ಮನೆಂಟ್ ರೆಸಿಡೆನ್ಸಿ (PR) ಸಿಕ್ಕ ಬಳಿಕವೇ ಭಾರತಕ್ಕೆ ಮರಳುತ್ತಾರೆ” ಎಂದು ಹೇಳಿ ಎಲ್ಲರ ಅನುಮಾನವನ್ನು ದೂರ ಮಾಡುತ್ತಿದ್ದಳು.

ಆದರೆ ಇತ್ತೀಚೆಗೆ ಜಿಗ್ನೇಶ್ ಸಂಬಂಧಿಯೊಬ್ಬರು ಆಸ್ಟ್ರೇಲಿಯಾಕ್ಕೆ ತೆರಳಲು ಸಿದ್ಧವಾಗಿದ್ದ ವೇಳೆ, ಜಿಗ್ನೇಶ್ ಅವರ ವಿಳಾಸ ಹಾಗೂ ಸಂಪರ್ಕ ಸಂಖ್ಯೆ ಕೇಳಿದರು. ಇದಕ್ಕೆ ಪೃಥ್ವಿ ಸರಿಯಾದ ಮಾಹಿತಿ ನೀಡದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಇದರಿಂದ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದಾಗ, ಎರಡು ವರ್ಷಗಳ ಹಿಂದೆ ನಡೆದಿದ್ದ ಕೊಲೆಯ ರಹಸ್ಯವನ್ನು ಪತ್ನಿಯೇ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ.

ಬಳಿಕ ಜಿಗ್ನೇಶ್ ಸಹೋದರ ಅಶೋಕ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಿದ ಪೊಲೀಸರು ಪೃಥ್ವಿ ಹಾಗೂ ಆಕೆಯ ಪ್ರಿಯಕರ ನೀಲೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಜಿಗ್ನೇಶ್‌ಗೆ ಮದ್ಯದಲ್ಲಿ ಸೈನೈಡ್ ಬೆರೆಸಿ ಕುಡಿಸಿ ಹತ್ಯೆ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಜಾಮ್‌ನಗರ ಹೊರವಲಯದ ಪಾಳುಬಿದ್ದ ಫ್ಯಾಕ್ಟರಿಯಲ್ಲಿ 12 ಅಡಿ ಆಳದ ಗುಂಡಿ ತೋಡಿ ಮೃತದೇಹವನ್ನು ಹೂತುಹಾಕಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಶೇಷವೆಂದರೆ, ಆ ಫ್ಯಾಕ್ಟರಿಯನ್ನು ಜಿಗ್ನೇಶ್ ಮತ್ತು ನೀಲೇಶ್ ಇಬ್ಬರೂ ಸೇರಿ ಲೀಸ್‌ಗೆ ಪಡೆದಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಸ್ತುತ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳದಲ್ಲಿ ಮೃತದೇಹದ ಅವಶೇಷಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣ ಸಂಬಂಧ ಪತ್ನಿ ಪೃಥ್ವಿ ಮತ್ತು ಆಕೆಯ ಪ್ರಿಯಕರ ನೀಲೇಶ್ ಅವರನ್ನು ಬಂಧಿಸಿರುವ ಪೊಲೀಸರು, ಕೊಲೆಯ ಹಿಂದಿನ ಸಂಪೂರ್ಣ ಸಂಚು ಹಾಗೂ ಇತರ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!