ಬಿಹಾರದ ಜೆಹಾನಾಬಾದ್ ಜಿಲ್ಲೆಯಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಊಟ ಬಡಿಸಲು ತಡವಾಯಿತೆಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಅತ್ತಿಗೆಯನ್ನು ಕೊಡಲಿಯಿಂದ ಕೊಚ್ಚಿ ಶಿರಚ್ಛೇದ ಮಾಡಿ ಹತ್ಯೆಗೈದಿರುವ ಆರೋಪ ಕೇಳಿಬಂದಿದೆ. ಹತ್ಯೆಯ ಬಳಿಕ ಕತ್ತರಿಸಿದ ರುಂಡವನ್ನು ಮನೆಯ ಮುಂಭಾಗದಲ್ಲಿದ್ದ ಮರಕ್ಕೆ ನೇತುಹಾಕಿ ವಿಕೃತಿ ಮೆರೆದಿದ್ದಾನೆ.

ಈ ಘಟನೆ ಪಾರ್ಸ್ ಬಿಘಾ ಪೊಲೀಸ್ ಠಾಣೆ ವ್ಯಾಪ್ತಿಯ ಇಮಾದ್‌ಪುರ ಗ್ರಾಮದಲ್ಲಿ ನಡೆದಿದ್ದು, ಮೃತೆಯನ್ನು ಧರ್ಮೇಂದ್ರ ಕುಮಾರ್ ಅವರ ಪತ್ನಿ, 25 ವರ್ಷದ ಅಂಶು ದೇವಿ ಎಂದು ಗುರುತಿಸಲಾಗಿದೆ. ಘಟನೆ ವೇಳೆ ಅಂಶು ದೇವಿ ಮನೆಯಲ್ಲಿ ಒಬ್ಬರೇ ಇದ್ದರೆ, ಕುಟುಂಬದ ಇತರೆ ಸದಸ್ಯರು ಹೊಲದ ಕೆಲಸಕ್ಕೆ ತೆರಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಆರೋಪಿ ಕುನಾಲ್ ಕುಮಾರ್ ಮಾದಕ ವ್ಯಸನಿಯಾಗಿದ್ದಾನೆ ಎನ್ನಲಾಗಿದೆ. ಹೊಲದಿಂದ ಮನೆಗೆ ಬಂದ ಆತ ಊಟ ಕೇಳಿದ್ದಾನೆ. ಊಟ ಬಡಿಸುವಲ್ಲಿ ಸ್ವಲ್ಪ ವಿಳಂಬವಾಗಿದ್ದರಿಂದ ಆಕ್ರೋಶಗೊಂಡ ಆತ, ಕೊಡಲಿಯಿಂದ ಅತ್ತಿಗೆಯ ಮೇಲೆ ಹಲ್ಲೆ ನಡೆಸಿ ಕತ್ತು ಕತ್ತರಿಸಿ ಕೊಲೆ ಮಾಡಿದ್ದಾನೆ. ಬಳಿಕ ಶಿರವನ್ನು ಮನೆಯ ಮುಂಭಾಗದ ಮರಕ್ಕೆ ನೇತುಹಾಕಿ ಪರಾರಿಯಾಗಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಅಮಾನುಷ ಕೃತ್ಯ ಇಡೀ ಗ್ರಾಮದಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

Related News

error: Content is protected !!