ಬಿಹಾರ: ಮದುವೆಯಾಗುವ ಭರವಸೆ ನೀಡಿ ಬಳಿಕ ನಿರಾಕರಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳವು ಭೀಕರ ಸ್ವರೂಪ ಪಡೆದುಕೊಂಡಿದ್ದು, ಮಹಿಳೆಯೊಬ್ಬರನ್ನು ಬೈಕ್‌ನಲ್ಲಿ ಸುಮಾರು 100 ಮೀಟರ್‌ಗಳಷ್ಟು ದೂರ ರಸ್ತೆಯಲ್ಲೇ ಎಳೆದೊಯ್ದ ಘಟನೆ ಬಿಹಾರದ ನಲಂದಾ ಜಿಲ್ಲೆಯ ರಾಜ್‌ಗಿರ್‌ನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಂತ್ರಸ್ತೆಯ ದೂರಿನ ಪ್ರಕಾರ, ಆರೋಪಿಯೊಂದಿಗೆ ಆಕೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಮದುವೆಯಾಗುವುದಾಗಿ ಆರೋಪಿ ಮಾತು ನೀಡಿದ್ದರೂ, ಇತ್ತೀಚೆಗೆ ಅದರಿಂದ ಹಿಂದೆ ಸರಿದಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಬಳಿಕ ಆರೋಪಿ ಬೈಕ್‌ನಲ್ಲಿ ಸ್ಥಳದಿಂದ ತೆರಳಲು ಮುಂದಾಗಿದ್ದಾನೆ. ಈ ವೇಳೆ ಮಹಿಳೆ ಬೈಕ್ ತಡೆಹಿಡಿಯಲು ಯತ್ನಿಸಿದ್ದಾಳೆ. ಆದರೆ ಆರೋಪಿ ಬೈಕ್‌ನ ವೇಗ ಹೆಚ್ಚಿಸಿದ ಪರಿಣಾಮ ಮಹಿಳೆ ರಸ್ತೆಯಲ್ಲೇ ಸುಮಾರು 100 ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಲ್ಪಟ್ಟಿದ್ದಾಳೆ. ನಂತರ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಮಗುಚಿಬಿದ್ದಿದೆ.

ಘಟನೆಯನ್ನು ಕಂಡ ಸ್ಥಳೀಯರು ಆರೋಪಿಯನ್ನು ಬೆನ್ನಟ್ಟಿ ಹಿಡಿದು ಥಳಿಸಿದ್ದಾರೆ. ಈ ವೇಳೆ “ಈಕೆ ನನ್ನ ಹೆಂಡತಿ, ಇದು ನಮ್ಮ ವೈಯಕ್ತಿಕ ವಿಷಯ” ಎಂದು ಆರೋಪಿ ಹೇಳುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ಪ್ರೀತಿಸುತ್ತಿದ್ದ ವಿಚಾರ ಮಾತ್ರ ದೃಢಪಟ್ಟಿದೆ.
ಆರೋಪಿ ನವಾಡಾ ಜಿಲ್ಲೆಯ ನಿವಾಸಿಯಾಗಿದ್ದು, ಸರ್ಕಾರಿ ಕಚೇರಿಯೊಂದರಲ್ಲಿ ಭೂ ಮಾಪಕ (ಲ್ಯಾಂಡ್ ಸರ್ವೇಯರ್) ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಸಂತ್ರಸ್ತೆ ನವಾಡಾ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದು, ಮದುವೆಗೆ ನಿರಾಕರಣೆ ಈ ಜಗಳಕ್ಕೆ ಪ್ರಮುಖ ಕಾರಣ ಎಂದು ರಾಜ್‌ಗಿರ್ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ತನಿಖೆ ಪೂರ್ಣಗೊಂಡ ಬಳಿಕ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯರು ಚಿತ್ರೀಕರಿಸಿದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಮಹಿಳೆಯ ಮೇಲಿನ ಅಮಾನವೀಯ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
