ಬೆಂಗಳೂರು: ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಆತಂಕ ಮೂಡಿಸುವ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ. ಕ್ಯಾಬ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದ ಯುವತಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಹಣ್ಣಿನ ವ್ಯಾಪಾರಿಯೊಬ್ಬನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆಯ ಪ್ರಕಾರ, ರಾಮಮೂರ್ತಿನಗರದ ರಸ್ತೆಯೊಂದರಲ್ಲಿ ಯುವತಿ ಕ್ಯಾಬ್‌ಗಾಗಿ ಕಾಯುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯ ಬಳಿ ಬಂದು ಅಸಭ್ಯವಾಗಿ “ರೇಟ್ ಎಷ್ಟು?” ಎಂದು ಪ್ರಶ್ನಿಸಿ ಕಿರುಕುಳ ನೀಡಿದ್ದಾನೆ. ಈ ವರ್ತನೆಯಿಂದ ಆಕ್ರೋಶಗೊಂಡ ಯುವತಿ ತನ್ನ ಮೊಬೈಲ್‌ನಲ್ಲಿ ಘಟನೆಯನ್ನು ಚಿತ್ರೀಕರಿಸಲು ಆರಂಭಿಸಿದ್ದು, ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾಳೆ. ಇದರಿಂದ ಗಾಬರಿಗೊಂಡ ಆರೋಪಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ನಂತರ ಯುವತಿ ಘಟನೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರನ್ನು ಆಗ್ರಹಿಸಿದ್ದಳು. ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ಆಧರಿಸಿ ರಾಮಮೂರ್ತಿನಗರ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು 42 ವರ್ಷದ ವಿಜಯ್ ರಾಘವ್‌ನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ರಾಮಮೂರ್ತಿನಗರದ ಎನ್‌ಆರ್‌ಐ ಲೇಔಟ್ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಹಣ್ಣಿನ ವ್ಯಾಪಾರಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಸ್ತುತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಇದೇ ವೇಳೆ, ಕಿರುಕುಳಕ್ಕೆ ಮಣಿಯದೆ ಧೈರ್ಯದಿಂದ ವೀಡಿಯೋ ದಾಖಲಿಸಿ ಆರೋಪಿಯನ್ನು ಕಾನೂನಿನ ಮುಂದೆ ತಂದ ಯುವತಿಯ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Related News

error: Content is protected !!