ದಾಂಡೇಲಿ: ದಾಂಡೇಲಿ ನಗರದ ಜಿ.ಎನ್. ರಸ್ತೆಯಲ್ಲಿರುವ ಹನುಮಾನ್ ಬಾರ್‌ನಲ್ಲಿ ಜಾತಿ ನಿಂದನೆ ನಡೆಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಂಡೇಲಿ ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಜುಲೈ 27ರಂದು ಸಂಜೆ ಸುಮಾರು 6.15 ಗಂಟೆಗೆ ಆರೋಪಿತರಾದ ಅಶೋಕ ದೇಮಣ್ಣ ಗುರವ, ಪೈರೋಜ್ ತಂದೆ ಅಬ್ದುಲ್ ಸತ್ತಾರ ದವಲತ್ತಿ ಹಾಗೂ ಆಸೀಪ್ ಅಲಿಯಾಸ್ ಅಕ್ಷರ ಫಕ್ರುದ್ದೀನ್ ನರಗುಂದ (ಮೂರೂ ಜನ ಮಾರುತಿ ನಗರ, ದಾಂಡೇಲಿ ನಿವಾಸಿಗಳು) ಸಂಗನಮತ ಮಾಡಿಕೊಂಡು ಹನುಮಾನ್ ಬಾರ್‌ಗೆ ತೆರಳಿ, ಅಲ್ಲಿದ್ದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜಾತಿ ನಿಂದನೆ ನಡೆಸಿ, ಕೊಲೆ ಮಾಡುವ ಉದ್ದೇಶದಿಂದ ಕೋಯಿತಾ (ಕುಡಗೋಲು), ಕಬ್ಬಿಣದ ರಾಡ್ ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 111/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ವಿವಿಧ ಕಲಂಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ-1989 ಹಾಗೂ 2015ರ ತಿದ್ದುಪಡಿ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ಪತ್ತೆ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದರು. ಖಚಿತ ಮಾಹಿತಿಯ ಆಧಾರದ ಮೇಲೆ ಜುಲೈ 28ರಂದು ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕೋಯಿತಾ, ಕಬ್ಬಿಣದ ರಾಡ್ ಹಾಗೂ ಸ್ಕೂಟಿಯನ್ನು ಪಂಚನಾಮೆ ಮೂಲಕ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಕೃಷ್ಣಮೂರ್ತಿ ಜಿ., ಡಿವೈಎಸ್‌ಪಿಗಳಾದ ಶ್ರೀ ಶಿವಾನಂದ ಮದರಕಂಡಿ ಹಾಗೂ ಶ್ರೀ ಶಿವಾನಂದ ಅಂಬಿಗೇರ, ದಾಂಡೇಲಿ ವೃತ್ತದ ಸಿಪಿಐ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಅಮೀನ್ ಎಂ. ಅತ್ತಾರ್, ಕಿರಣ್ ಬಿ. ಪಾಟೀಲ್, ಎಎಸ್‌ಐಗಳಾದ ರಾಜಪ್ಪ ದೊಡಮನಿ, ನಜೀರ್ ಹಳಿಯಾಳಕರ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಪ್ಪ ಬೆಳವರಿ, ಸುನೀಲ್ ಲುಗಾಡೆ, ಬಸವರಾಜ ತೇಲಸಂಗ್, ರಮೇಶ್ ನಿಂಬರಗಿ, ಪ್ರಸನ್ನಕುಮಾರ್ ಜಿ.ಎನ್., ಕುಮಾರ ಹರಿಜನ, ಲೋಕೇಶ್ ದೇವರೆಡ್ಡಿ, ಚಂದ್ರಶೇಖರ ಪಾಟೀಲ್, ಉಮೇಶ್ ಹನಗಂಡಿ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಕರಣದ ಆರೋಪಿಗಳನ್ನು ಅತಿ ಕಡಿಮೆ ಅವಧಿಯಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.

Related News

error: Content is protected !!