ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೊಳೂರು ಗ್ರಾಮದಲ್ಲಿ 2014ರಲ್ಲಿ ನಡೆದಿದ್ದ ದಲಿತ ಮುಖಂಡ ದೇವೇಂದ್ರಪ್ಪ ಭೀಮಪ್ಪ ದಳಪತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ವರ್ಷಗಳ ಸುದೀರ್ಘ ನ್ಯಾಯಾಂಗ ಹೋರಾಟದ ಬಳಿಕ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪ್ರಕರಣದ 17 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಮತ್ತೊಬ್ಬ ಆರೋಪಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ಇಬ್ಬರು ಆರೋಪಿಗಳಿಗೆ ತಲಾ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಪ್ರಧಾನ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮರುಳಸಿದ್ದಾರಾಧ್ಯ ಎಚ್.ಜೆ. ಅವರು ಗುರುವಾರ ತೀರ್ಪು ಪ್ರಕಟಿಸಿದರು. ನ್ಯಾಯಾಲಯವು ಎಲ್ಲಾ ಆರೋಪಿಗಳಿಗೆ ಸೇರಿ ಒಟ್ಟು ₹4.25 ಲಕ್ಷ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಮೃತ ದೇವೇಂದ್ರಪ್ಪ ದಳಪತಿ ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ. ಅಲ್ಲದೆ, ಹೆಚ್ಚಿನ ಪರಿಹಾರ ಪಡೆಯಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಕುಟುಂಬಕ್ಕೆ ಸೂಚಿಸಿದೆ.

ಜಾತ್ರೆಯಲ್ಲಿ ಆರಂಭವಾದ ವಿವಾದ ಕೊಲೆಯಲ್ಲಿ ಅಂತ್ಯ

2014ರ ಜನವರಿಯಲ್ಲಿ ಕನ್ಯಾಕೊಳೂರು ಗ್ರಾಮದಲ್ಲಿ ನಡೆದ ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಸಂದರ್ಭದಲ್ಲಿ ಬ್ಯಾನರ್ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಜಾತಿ ವೈಷಮ್ಯ ಉಂಟಾಗಿ, ಅದು ನಂತರ ಹಿಂಸಾತ್ಮಕ ರೂಪ ಪಡೆದಿತ್ತು. ಈ ವೇಳೆ ದೇವೇಂದ್ರಪ್ಪ ದಳಪತಿ ಅವರ ಮೇಲೆ ಕೊಡಲಿ, ಬಡಿಗೆ ಹಾಗೂ ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

68 ಸಾಕ್ಷಿದಾರರಲ್ಲಿ 37 ಮಂದಿಯ ಸಾಕ್ಷ್ಯ ದಾಖಲು

ಪ್ರಕರಣದಲ್ಲಿ ಒಟ್ಟು 32 ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ 68 ಸಾಕ್ಷಿದಾರರ ಪೈಕಿ 37 ಮಂದಿಯ ಸಾಕ್ಷ್ಯವನ್ನು ನ್ಯಾಯಾಲಯ ದಾಖಲಿಸಿಕೊಂಡು, ಸಾಕ್ಷ್ಯಾಧಾರಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿ ತೀರ್ಪು ನೀಡಿದೆ. ಅದರಂತೆ ಆರೋಪಿ ಸಂಖ್ಯೆ 1ರಿಂದ 17ರವರೆಗೆ ಜೀವಾವಧಿ ಶಿಕ್ಷೆ, ಆರೋಪಿ ಸಂಖ್ಯೆ 18ಕ್ಕೆ 7 ವರ್ಷಗಳ ಶಿಕ್ಷೆ ಹಾಗೂ ಆರೋಪಿ ಸಂಖ್ಯೆ 19 ಮತ್ತು 20ಕ್ಕೆ ತಲಾ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.

ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ತೀರ್ಪಿನ ಹಿನ್ನೆಲೆಯಲ್ಲಿ ಕನ್ಯಾಕೊಳೂರು ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

Related News

error: Content is protected !!