ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧಿ ಪಡೆದಿರುವ ಕಪ್ಪತ್ತಗುಡ್ಡ ಮಳೆಗಾಲದ ಆಗಮನದೊಂದಿಗೆ ಹಸಿರು ಹೊದಿಕೆ ತೊಟ್ಟು ಪ್ರಕೃತಿ ಪ್ರೇಮಿಗಳು, ಚಾರಣಿಗರು ಹಾಗೂ ಯಾತ್ರಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. ಹದವಾದ ಮಳೆಯ ಸಿಂಚನದಿಂದ ಗುಡ್ಡದ ಎಲ್ಲೆಡೆ ಬಣ್ಣಬಣ್ಣದ ಹೂಗಳು ಅರಳಿದ್ದು, ಅಪರೂಪದ ಔಷಧೀಯ ಸಸ್ಯಗಳ ಪರಿಮಳ ಇಡೀ ಪರಿಸರವನ್ನು ಸುಗಂಧಮಯಗೊಳಿಸಿದೆ.
“ಎಪ್ಪತ್ತುಗಿರಿ ನೋಡುವುದಕ್ಕಿಂತ ಕಪ್ಪತ್ತಗಿರಿ ನೋಡುವುದೇ ಮೇಲು” ಎಂಬ ಜನಪದ ನುಡಿ ಈ ಗಿರಿಶ್ರೇಣಿಯ ವೈಭವವನ್ನು ಸಾರುತ್ತದೆ. ಔಷಧೀಯ ಸಸ್ಯಗಳ ಭಂಡಾರ, ಜೀವವೈವಿಧ್ಯದ ಆಶ್ರಯತಾಣ, ಪರಿಸರ ಅಧ್ಯಯನದ ಕೇಂದ್ರ ಹಾಗೂ ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳಲ್ಲಿ ಒಂದೆಂಬ ಹೆಗ್ಗಳಿಕೆಯನ್ನು ಕಪ್ಪತ್ತಗುಡ್ಡ ಹೊಂದಿದೆ.

ಸುಮಾರು 33 ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಶಿರಹಟ್ಟಿ, ಮುಂಡರಗಿ ಹಾಗೂ ಗದಗ ತಾಲ್ಲೂಕುಗಳಲ್ಲಿ ಹರಡಿರುವ ಈ ಗಿರಿಶ್ರೇಣಿ ಬಿಂಕದಕಟ್ಟಿಯಿಂದ ಸಿಂಗಟಾಲೂರಿನವರೆಗೆ ಸುಮಾರು 64 ಕಿಲೋಮೀಟರ್ ವಿಸ್ತರಿಸಿದೆ. ಬೇಸಿಗೆಯಲ್ಲಿ ಬೋಳುಗುಡ್ಡದಂತೆ ಕಾಣುವ ಪ್ರದೇಶ ಮಳೆಗಾಲದಲ್ಲಿ ಹಚ್ಚಹಸಿರಾಗಿ ರೂಪಾಂತರಗೊಂಡು ಪ್ರಕೃತಿಯ ಅದ್ಭುತ ಸೊಬಗನ್ನು ಅನಾವರಣಗೊಳಿಸುತ್ತದೆ.
ಪರಿಸರ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ವಿನೂತನ ಪ್ರಯತ್ನ
ಕಪ್ಪತ್ತಗುಡ್ಡಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಪರಿಸರ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಹಲವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಮಳೆಗಾಲದಲ್ಲಿ ಆಗಮಿಸುವ ಪ್ರವಾಸಿಗರಿಗೆ ವಿವಿಧ ಜಾತಿಯ 10 ಸಾವಿರಕ್ಕೂ ಹೆಚ್ಚು ಬೀಜದುಂಡೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಗಿಡ ನೆಡುವ ಸಂಸ್ಕೃತಿಯನ್ನು ಉತ್ತೇಜಿಸುವ ಕಾರ್ಯ ನಡೆಯುತ್ತಿದೆ.
ಇದರ ಜೊತೆಗೆ ಪ್ಲಾಸ್ಟಿಕ್ ಮುಕ್ತ ಕಪ್ಪತ್ತಗುಡ್ಡ ಅಭಿಯಾನದಡಿ ಪ್ರವಾಸಿಗರು ತರುವ ಪ್ಲಾಸ್ಟಿಕ್ ಬಾಟಲಿಗಳಿಗೆ ಸ್ಟಿಕ್ಕರ್ ಅಳವಡಿಸಿ ಅವುಗಳನ್ನು ಮರಳಿ ಕೊಂಡೊಯ್ಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಕ್ರಮದಿಂದ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣದಲ್ಲಿ ಗಮನಾರ್ಹ ಯಶಸ್ಸು ದೊರೆತಿದ್ದು, ಪರಿಸರ ಸಂರಕ್ಷಣೆಗೆ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ.

ಗಾಳಿಗುಂಡಿ ಬಸವಣ್ಣ ಮತ್ತು ಪವನಶಕ್ತಿಯ ವೈಭವ
ಕಪ್ಪತಮಲ್ಲೇಶ್ವರ ದೇವಸ್ಥಾನದಿಂದ ಮುಂದಕ್ಕೆ ಚಾರಣ ಮಾಡಿದರೆ ಗಾಳಿಗುಂಡಿ ಬಸವಣ್ಣ ದೇವಾಲಯ ತಲುಪಬಹುದು. ಈ ಪ್ರದೇಶದಲ್ಲಿ ಬಿರುಸಾಗಿ ಬೀಸುವ ಗಾಳಿ ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಗುಡ್ಡದ ತುದಿಯಲ್ಲಿರುವ ಬೃಹತ್ ಪವನಚಕ್ರಗಳು, ತಂಗಾಳಿ, ಮೋಡಗಳ ಸಂಚಾರ ಹಾಗೂ ಸುತ್ತಮುತ್ತಲಿನ ಹಸಿರು ನೋಟ ಪ್ರವಾಸಿಗರ ಮನಸೆಳೆಯುತ್ತದೆ.
ಜೀವವೈವಿಧ್ಯದ ಅಪರೂಪದ ನೆಲೆ
ಕಪ್ಪತ್ತಗುಡ್ಡವು ಅಪರೂಪದ ಔಷಧೀಯ ಸಸ್ಯಗಳ ಆಗರವಾಗಿದ್ದು, ಆಯುರ್ವೇದ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಪ್ರಮುಖ ಅಧ್ಯಯನ ಕೇಂದ್ರವಾಗಿದೆ. ಇಲ್ಲಿ ಚಿರತೆ, ಕರಡಿ, ತೋಳ, ನರಿ, ಪುನುಗು ಬೆಕ್ಕು, ಚುಕ್ಕೆ ಜಿಂಕೆ, ಸಾರಂಗ, ಮುಳ್ಳುಹಂದಿ ಸೇರಿದಂತೆ ಅನೇಕ ವನ್ಯಜೀವಿಗಳು ವಾಸಿಸುತ್ತಿವೆ. ನವಿಲು, ಬುಲ್ಬುಲ್, ಸನ್ಬರ್ಡ್, ಮಿಂಚುಳ್ಳಿ ಹಾಗೂ ಬ್ಲ್ಯಾಕ್ ಡ್ರಾಂಗೋ ಸೇರಿದಂತೆ ಹಲವು ಪಕ್ಷಿಗಳು ಪಕ್ಷಿಪ್ರಿಯರು ಹಾಗೂ ಛಾಯಾಗ್ರಾಹಕರನ್ನು ಆಕರ್ಷಿಸುತ್ತವೆ.

ಬೆಟ್ಟದ ತಪ್ಪಲಿನಲ್ಲಿರುವ ಅರಣ್ಯ ಇಲಾಖೆಯ ಶ್ರೀ ಕಪ್ಪತಮಲ್ಲೇಶ್ವರ ದೈವೀವನದಲ್ಲಿ ನೂರಾರು ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದ್ದು, ಪ್ರತಿಯೊಂದು ಸಸ್ಯಕ್ಕೂ ಮಾಹಿತಿ ಫಲಕ ಅಳವಡಿಸಲಾಗಿದೆ. ಪ್ರವಾಸಿಗರಿಗೆ ಉಚಿತ ಪ್ರವೇಶವಿದ್ದು, ಇದು ಪರಿಸರ ಶಿಕ್ಷಣದ ಜೀವಂತ ಕೇಂದ್ರವಾಗಿ ರೂಪುಗೊಂಡಿದೆ.
ಹೋರಾಟದಿಂದ ಉಳಿದ ಹಸಿರು ಸಂಪತ್ತು
ಹೆಮಟೈಟ್, ಲಿಮೋನೈಟ್, ತಾಮ್ರ, ಮ್ಯಾಂಗನೀಸ್ ಹಾಗೂ ಚಿನ್ನ ಸೇರಿದಂತೆ ಅಮೂಲ್ಯ ಖನಿಜ ಸಂಪತ್ತನ್ನು ಹೊಂದಿರುವ ಕಪ್ಪತ್ತಗುಡ್ಡದಲ್ಲಿ ಹಿಂದೆ ಗಣಿಗಾರಿಕೆ ನಡೆಸುವ ಯತ್ನಗಳು ನಡೆದಿದ್ದವು. ಆದರೆ ವಿವಿಧ ಮಠಾಧೀಶರು, ಪರಿಸರ ಹೋರಾಟಗಾರರು, ಚಿಂತಕರು ಹಾಗೂ ಸ್ಥಳೀಯ ನಾಗರಿಕರ ಹೋರಾಟದಿಂದ ಈ ಪ್ರದೇಶ ಸಂರಕ್ಷಿಸಲ್ಪಟ್ಟಿದೆ.
ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಸೇರಿದಂತೆ ಅನೇಕ ಪರಿಸರ ಪ್ರೇಮಿಗಳ ಜಾಗೃತಿ ಅಭಿಯಾನದ ಫಲವಾಗಿ ಇಂದು ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಪರಿಸರ ಸಮತೋಲನ ಕಾಪಾಡುವ ಪ್ರಮುಖ ಹಸಿರು ಸಂಪತ್ತಾಗಿ ಉಳಿದಿದೆ.

ಮಳೆಗಾಲದಲ್ಲಿ ಭೇಟಿ ನೀಡಲು ಅತ್ಯುತ್ತಮ ಸಮಯ
ಮಳೆಗಾಲದಲ್ಲಿ ಕಪ್ಪತ್ತಗುಡ್ಡದ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ದೇಶ-ವಿದೇಶಗಳಿಂದ ಪ್ರತಿದಿನ ನೂರಾರು ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಿದ್ದು, ಶುದ್ಧ ಗಾಳಿ, ಹಚ್ಚಹಸಿರು ವಾತಾವರಣ, ಔಷಧೀಯ ಸಸ್ಯ ಸಂಪತ್ತು ಹಾಗೂ ಚಾರಣದ ಅದ್ಭುತ ಅನುಭವಕ್ಕಾಗಿ ಇದು ಅತ್ಯುತ್ತಮ ತಾಣವಾಗಿದೆ.
ಪರಿಸರ ತಜ್ಞರ ಅಭಿಪ್ರಾಯದಂತೆ, ಕಪ್ಪತ್ತಗುಡ್ಡದಂತಹ ಹಸಿರು ಪ್ರದೇಶಗಳ ಸಂರಕ್ಷಣೆ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಹಾಗೂ ಉತ್ತಮ ಪರಿಸರವನ್ನು ಒದಗಿಸುತ್ತದೆ. ಉತ್ತಮ ಮಳೆ ಮತ್ತು ಸಮೃದ್ಧ ಬೆಳೆಗಾಗಿ ಪ್ರತಿಯೊಬ್ಬರೂ ತಮ್ಮ ಜಮೀನುಗಳ ಬದುಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಅಧಿಕಾರಿಯ ಮಾತು
“ಕಪ್ಪತ್ತಗುಡ್ಡ ಇಂದು ಕೇವಲ ಪ್ರವಾಸಿ ತಾಣವಲ್ಲ, ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಜೀವಂತ ಪಾಠಶಾಲೆಯಾಗಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಪ್ಲಾಸ್ಟಿಕ್ ಮುಕ್ತ ಕಪ್ಪತ್ತಗುಡ್ಡ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಪ್ರವಾಸಿಗರು ವೀಕ್ಷಣೆ ನಡೆಸಬೇಕು. ನಿಯಮ ಉಲ್ಲಂಘಿಸಿ ಪರಿಸರಕ್ಕೆ ಹಾನಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಮುಂಡರಗಿ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ತಿಳಿಸಿದ್ದಾರೆ.
