ಮೊದಲ ಬಾರಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಆಡಳಿತಾತ್ಮಕ ಬದಲಾವಣೆ ನಡೆಯುತ್ತಿದೆ. ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ದೇಶಾದ್ಯಂತ ವ್ಯಕ್ತವಾದ ಆಕ್ರೋಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಕಠಿಣ ಕ್ರಮಗಳಿಗೆ ಮುಂದಾಗಿದೆ. ಈ ಕ್ರಮದ ಭಾಗವಾಗಿ ಈಗಾಗಲೇ ಸುಮಾರು 47 ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎನ್ಟಿಎ ದೇಶದ ಪ್ರಮುಖ ಪ್ರವೇಶ ಪರೀಕ್ಷೆಗಳಾದ NEET-UG, JEE Main, CUET ಸೇರಿದಂತೆ 15 ರಿಂದ 20 ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನಡೆಸುವ ಪ್ರಮುಖ ಸಂಸ್ಥೆಯಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ, ಮುಂದಿನ ಒಂದು ತಿಂಗಳೊಳಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗಳನ್ನು ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿದೆ.
ಸಿಬ್ಬಂದಿ ಬದಲಾವಣೆ ಮಾತ್ರವಲ್ಲ, ಆಡಳಿತಕ್ಕೂ ಮೇಜರ್ ಸರ್ಜರಿ
ವಜಾಗೊಂಡಿರುವ 47 ಸಿಬ್ಬಂದಿಯಲ್ಲಿ ಕೆಲವರ ವಿರುದ್ಧ ಗಂಭೀರ ಶಿಸ್ತು ಕ್ರಮಗಳೂ ಕೈಗೊಳ್ಳಲಾಗುತ್ತಿದೆ. ಕೇವಲ ಸಿಬ್ಬಂದಿ ಬದಲಾವಣೆ ಮಾಡುವುದಲ್ಲದೆ, ಸಂಸ್ಥೆಯ ಜವಾಬ್ದಾರಿ, ಹೊಣೆಗಾರಿಕೆ ಹಾಗೂ ಕಾರ್ಯನಿರ್ವಹಣೆಯ ಸಂಪೂರ್ಣ ವ್ಯವಸ್ಥೆಯನ್ನು ಮರುರೂಪಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಔಟ್ಸೋರ್ಸಿಂಗ್ ವ್ಯವಸ್ಥೆಗೆ ಬ್ರೇಕ್
ಪರೀಕ್ಷಾ ಪ್ರಕ್ರಿಯೆಯಲ್ಲಿ ಹೊರಗುತ್ತಿಗೆ (Outsourcing) ಮಾದರಿಯನ್ನು ಅವಲಂಬಿಸಿರುವ ವಿಧಾನದಲ್ಲೂ ಮಹತ್ವದ ಬದಲಾವಣೆ ತರಲು ನಿರ್ಧರಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾಗುವ ಸಾಧ್ಯತೆ ಇರುವ ಹಂತಗಳನ್ನು ಗುರುತಿಸಿ, ಅವುಗಳನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಹೊಸ ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೆ ಬರಲಿದೆ.
ಪೇಪರ್ ಲೀಕ್ ತಡೆಗೆ ಹೈಟೆಕ್ ಭದ್ರತೆ
ಉನ್ನತ ಮಟ್ಟದ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಪರೀಕ್ಷಾ ವ್ಯವಸ್ಥೆಯಲ್ಲಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸಲಾಗುತ್ತಿದೆ. ಪಾರದರ್ಶಕತೆ ಹೆಚ್ಚಿಸುವುದರ ಜೊತೆಗೆ, ಯಾವುದೇ ಸಂದರ್ಭದಲ್ಲೂ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಅಳವಡಿಸುವ ಯೋಜನೆ ಸರ್ಕಾರದ ಮುಂದಿದೆ.
ಐತಿಹಾಸಿಕ ಸುಧಾರಣೆಗೆ ಚಾಲನೆ
ನೀಟ್ ವಿವಾದದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಎನ್ಟಿಎಯಲ್ಲಿ ಇದೀಗ ಆರಂಭವಾಗಿರುವ ಈ ಬದಲಾವಣೆಗಳು ಸಂಸ್ಥೆ ಸ್ಥಾಪನೆಯಾದ ನಂತರದ ಅತಿದೊಡ್ಡ ಆಡಳಿತಾತ್ಮಕ ಸುಧಾರಣೆ ಎಂದು ಹೇಳಲಾಗುತ್ತಿದೆ. ದೇಶದ ಪ್ರಮುಖ ಪ್ರವೇಶ ಪರೀಕ್ಷೆಗಳ ವಿಶ್ವಾಸಾರ್ಹತೆ, ಭದ್ರತೆ ಮತ್ತು ಪವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
