ಝಾರ್ಖಂಡ್‌ನಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮದುವೆಗೆ ನಿಶ್ಚಯವಾಗಿದ್ದ ಯುವಕನನ್ನು ಕಾಡಿಗೆ ಕರೆಸಿ ಹತ್ಯೆಗೈದ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತನ್ನ ಅಕ್ಕನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವತಿ, ಮದುವೆಯಾದರೆ ಆ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಭಾವಿ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾಳೆ.

ಜಮುವಾ ಚೌಕ್ ನಿವಾಸಿ 20 ವರ್ಷದ ನೀರಜ್‌ಗೆ ಊರ್ಮಿಳಾ ಎಂಬ ಯುವತಿಯೊಂದಿಗೆ ಕುಟುಂಬಸ್ಥರು ಮದುವೆ ನಿಶ್ಚಯಿಸಿದ್ದರು. ಮದುವೆ ಸಿದ್ಧತೆಗಳು ಎರಡೂ ಕುಟುಂಬಗಳಲ್ಲಿ ಜೋರಾಗಿ ನಡೆಯುತ್ತಿದ್ದರೂ, ಊರ್ಮಿಳಾ ತನ್ನ ಅಕ್ಕನ ಪತಿ ಸುಭಾಷ್ ಪಾಸ್ವಾನ್‌ನೊಂದಿಗೆ ಅಕ್ರಮ ಸಂಬಂಧ ಮುಂದುವರಿಸುತ್ತಿದ್ದಳು ಎನ್ನಲಾಗಿದೆ. ಈ ಸಂಬಂಧಕ್ಕೆ ನೀರಜ್ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಿನಂತೆ ಊರ್ಮಿಳಾ, ನೀರಜ್‌ಗೆ ಕರೆ ಮಾಡಿ ಯಾರಿಗೂ ತಿಳಿಸದೆ ಕಾಡಿನ ಪ್ರದೇಶಕ್ಕೆ ಬರಲು ಹೇಳಿದ್ದಳು. ಭಾವಿ ಪತ್ನಿಯ ಮಾತನ್ನು ನಂಬಿದ ನೀರಜ್ ನಿಗದಿತ ಸ್ಥಳಕ್ಕೆ ತೆರಳಿದ್ದಾನೆ. ಅಲ್ಲಿ ಮೊದಲೇ ಅಡಗಿ ಕುಳಿತಿದ್ದ ಸುಭಾಷ್ ಮತ್ತು ಊರ್ಮಿಳಾ, ನೀರಜ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾರೆ. ಗಂಭೀರ ಗಾಯಗೊಂಡ ನೀರಜ್ ಸ್ಥಳದಲ್ಲೇ ಮೃತಪಟ್ಟಿದ್ದು, ಬಳಿಕ ಆರೋಪಿಗಳು ಮೃತದೇಹವನ್ನು ಬಿಟ್ಟು ಪರಾರಿಯಾಗಿದ್ದರು.

ಮಗ ಮನೆಗೆ ವಾಪಸ್ ಬಾರದೇ ಇದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ವೇಳೆ ಮೊಬೈಲ್ ಕರೆ ವಿವರಗಳು ಹಾಗೂ ಲೊಕೇಶನ್ ಪರಿಶೀಲಿಸಿದಾಗ, ನೀರಜ್ ಮತ್ತು ಊರ್ಮಿಳಾ ಇಬ್ಬರ ಮೊಬೈಲ್‌ಗಳು ಒಂದೇ ಸಮಯದಲ್ಲಿ ಬೇಲಾ ಅರಣ್ಯ ಪ್ರದೇಶದಲ್ಲಿದ್ದವು ಎಂಬುದು ಗೊತ್ತಾಗಿದೆ.

ಈ ಆಧಾರದ ಮೇಲೆ ಊರ್ಮಿಳಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಕ್ಕನ ಗಂಡನೊಂದಿಗೆ ಹೊಂದಿದ್ದ ಅಕ್ರಮ ಸಂಬಂಧಕ್ಕಾಗಿ ಭಾವಿ ಪತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಸುಭಾಷ್ ಪಾಸ್ವಾನ್‌ನನ್ನೂ ಬಂಧಿಸಲಾಗಿದ್ದು, ಇಬ್ಬರ ವಿರುದ್ಧ ಕೊಲೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮುಂದುವರಿಸಲಾಗಿದೆ.

Related News

error: Content is protected !!