ಲಂಡನ್: ಬ್ರಿಟನ್‌ನ ಲಂಡನ್ ನಗರದಲ್ಲಿರುವ ಐಷಾರಾಮಿ ಕೆನ್ಸಿಂಗ್ಟನ್ ಪ್ರದೇಶದ ಮ್ಯಾರಿಯಟ್ ಹೋಟೆಲ್‌ನಲ್ಲಿ ಸಾವನ್ನಪ್ಪಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಬ್ದುಲ್ಲಾ ಬಿನ್ ಫಹಾದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲಾಜೀಜ್ ಬಿನ್ ಜಲವಿ ಅಲ್ ಸೌದ್ ಅವರ ಸಾವಿನ ಕುರಿತು ಕರೋನರ್ ನ್ಯಾಯಾಲಯದ ತನಿಖಾ ವರದಿ ಬಹಿರಂಗಗೊಂಡಿದೆ. ತನಿಖೆಯಲ್ಲಿ, ಅತಿಯಾದ ಮದ್ಯಪಾನ ಹಾಗೂ ವಿವಿಧ ಮಾದಕ ವಸ್ತುಗಳ ಸಂಯುಕ್ತ ಪರಿಣಾಮದಿಂದ ಉಂಟಾದ ಹೃದಯ ಸ್ತಂಭನವೇ ಸಾವಿಗೆ ಕಾರಣ ಎಂದು ದೃಢಪಟ್ಟಿದೆ.
ವೈದ್ಯಕೀಯ ಮತ್ತು ವಿಷಶಾಸ್ತ್ರ ವರದಿಗಳ ಪ್ರಕಾರ, ರಾಜಕುಮಾರನ ರಕ್ತದಲ್ಲಿ 100 ಮಿಲಿಲೀಟರ್‌ಗೆ 222 ಮಿಲಿಗ್ರಾಂ ಪ್ರಮಾಣದ ಆಲ್ಕೋಹಾಲ್ ಪತ್ತೆಯಾಗಿದೆ. ಇದು ಇಂಗ್ಲೆಂಡ್‌ನಲ್ಲಿ ವಾಹನ ಚಾಲನೆಗೆ ಅನುಮತಿಸಿರುವ ಮಿತಿಗಿಂತ ಸುಮಾರು ಮೂರು ಪಟ್ಟು ಅಧಿಕವಾಗಿದೆ. ವೈದ್ಯರ ಪ್ರಕಾರ, ಈ ಮಟ್ಟದ ಮದ್ಯ ಸೇವನೆಯೇ ವ್ಯಕ್ತಿಯನ್ನು ಪ್ರಜ್ಞಾಹೀನ ಸ್ಥಿತಿಗೆ ತಳ್ಳುವಷ್ಟು ಅಪಾಯಕಾರಿ.
ಇದರ ಜೊತೆಗೆ, ದೇಹದಲ್ಲಿ ಪಾರ್ಟಿ ಡ್ರಗ್ ಎಂದು ಕರೆಯಲಾಗುವ GHB (ಗಾಮಾ-ಹೈಡ್ರಾಕ್ಸಿಬ್ಯುಟೈರೇಟ್), ಗಾಂಜಾ, ಕ್ಸಾನಾಕ್ಸ್ (Xanax) ಹಾಗೂ ಆತಂಕ ನಿವಾರಕ ಔಷಧಿಗಳ ಕುರುಹುಗಳು ಪತ್ತೆಯಾಗಿವೆ. ಈ ಎಲ್ಲಾ ಮಾದಕ ವಸ್ತುಗಳು ಮತ್ತು ಮದ್ಯದ ಸಂಯುಕ್ತ ಪರಿಣಾಮದಿಂದ ಹೃದಯ ಸ್ತಂಭನ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಖಿನ್ನತೆ ಮತ್ತು ವ್ಯಸನದಿಂದ ಬಳಲುತ್ತಿದ್ದರು
ನ್ಯಾಯಾಲಯದ ವಿಚಾರಣೆಯಲ್ಲಿ, ರಾಜಕುಮಾರ ಅಬ್ದುಲ್ಲಾ ಕೆಲ ವರ್ಷಗಳಿಂದ ಖಿನ್ನತೆ ಹಾಗೂ ಮದ್ಯ ಮತ್ತು ಔಷಧ ವ್ಯಸನದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಹೊರಬಂದಿದೆ.
ಆಗಸ್ಟ್ 2025ರಲ್ಲಿ ಅವರು ರೋಹ್ಯಾಂಪ್ಟನ್‌ನ ಪ್ರಿಯರಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದಿದ್ದು, ಬಳಿಕ ಮರ್ಸಿಸೈಡ್‌ನ ರೇನ್‌ಫೋರ್ಡ್ ಹಾಲ್ ಕ್ಲಿನಿಕ್ನಲ್ಲೂ ಚಿಕಿತ್ಸೆ ಮುಂದುವರಿಸಿದ್ದರು. ಆದರೆ ನಂತರ ನಿಗದಿತ ವೈದ್ಯಕೀಯ ಪರಿಶೀಲನೆಗಳಿಗೆ ಹಾಜರಾಗಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆತ್ಮಹತ್ಯೆ ಅಥವಾ ಕೊಲೆ ಅಲ್ಲ
ಸಹಾಯಕ ಕರೋನರ್ ಜೀನ್ ಹಾರ್ಕಿನ್, ಲಭ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ, ಇದನ್ನು “ದುರಂತಮಯ ಸಾವು” (Misadventure) ಎಂದು ತೀರ್ಮಾನಿಸಿದ್ದಾರೆ.
ತನಿಖೆಯಲ್ಲಿ ಆತ್ಮಹತ್ಯೆಯನ್ನು ಸೂಚಿಸುವ ಯಾವುದೇ ಡೆತ್ ನೋಟ್ ಅಥವಾ ಮುನ್ಸೂಚನೆ ಸಿಕ್ಕಿಲ್ಲ. ಅಲ್ಲದೆ, ಘಟನೆಯಲ್ಲಿ ಮೂರನೇ ವ್ಯಕ್ತಿಯ ಭಾಗವಹಿಸುವಿಕೆ ಅಥವಾ ಕೊಲೆಯ ಯಾವುದೇ ಪುರಾವೆಯೂ ಪತ್ತೆಯಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹೋಟೆಲ್‌ನಲ್ಲಿ ಹೇಗೆ ಪತ್ತೆಯಾಯಿತು ಮೃತದೇಹ?
ಘಟನೆ ನಡೆದಿದ್ದು ಲಂಡನ್‌ನ ಕೆನ್ಸಿಂಗ್ಟನ್ ಪ್ರದೇಶದ ಐಷಾರಾಮಿ ಮ್ಯಾರಿಯಟ್ ಹೋಟೆಲ್‌ನಲ್ಲಿ. ರಾತ್ರಿ ತಂಗಲು ಸುಮಾರು £600 ವೆಚ್ಚವಾಗುವ ಕೋಣೆಯ ಐದನೇ ಮಹಡಿಯ ಸ್ನಾನಗೃಹದಲ್ಲಿ, ಸಂಪೂರ್ಣ ಬಟ್ಟೆ ಧರಿಸಿದ ಸ್ಥಿತಿಯಲ್ಲಿ ರಾಜಕುಮಾರನ ಮೃತದೇಹವನ್ನು ಹೋಟೆಲ್ ಸಿಬ್ಬಂದಿ ಪತ್ತೆಹಚ್ಚಿದ್ದರು.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಸಾವಿಗೆ ಕೆಲವೇ ಗಂಟೆಗಳ ಮೊದಲು ರಾಜಕುಮಾರ ಸಿಗರೇಟ್ ಸೇದಲು ಕೋಣೆಯಿಂದ ಹೊರಬಂದಿರುವುದು ಕೊನೆಯದಾಗಿ ದಾಖಲಾಗಿತ್ತು. ಬಳಿಕ ಅವರು ಒಬ್ಬರೇ ಕೋಣೆಗೆ ಮರಳಿದ್ದು, ಅಲ್ಲಿಂದ ಹೊರಬಂದಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ನಡುವೆ, ಸೌದಿ ರಾಯಲ್ ಕೋರ್ಟ್ ರಾಜಕುಮಾರನ ನಿಧನವನ್ನು ಅಧಿಕೃತವಾಗಿ ದೃಢಪಡಿಸಿದ್ದು, ರಿಯಾದ್‌ನ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ಅಂತಿಮ ಪ್ರಾರ್ಥನೆಗಳು ನೆರವೇರಿಸಲಾಯಿತು ಎಂದು ತಿಳಿಸಿದೆ.
