ಹರ್ಯಾಣದ ಪಾಣಿಪತ್ನಲ್ಲಿ ಮದುವೆಯಾದ ಕೇವಲ ಮೂರು ತಿಂಗಳಲ್ಲೇ ಪತಿಯ ಕುಟುಂಬಕ್ಕೆ ಆಘಾತ ಉಂಟುಮಾಡಿದ ಘಟನೆ ಬೆಳಕಿಗೆ ಬಂದಿದೆ. ಗರ್ಭಿಣಿಯಾಗಿದ್ದ ಮಹಿಳೆ ತವರು ಮನೆಗೆ ತೆರಳಿ ಪತಿಯ ಗಮನಕ್ಕೆ ತರದೇ ಗರ್ಭಪಾತ ಮಾಡಿಸಿಕೊಂಡು, ಬಳಿಕ ನೈಸರ್ಗಿಕವಾಗಿ ಗರ್ಭಪಾತವಾಗಿದೆ ಎಂದು ನಂಬಿಸಿದ್ದಾಳೆ. ಅದಾದ ಕೆಲವೇ ದಿನಗಳಲ್ಲಿ ಮನೆಯವರ ಚಹಾದಲ್ಲಿ ನಿದ್ದೆ ಮಾತ್ರೆ ಬೆರೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವ ಆರೋಪ ಕೇಳಿಬಂದಿದೆ.
ಮಾಹಿತಿಯ ಪ್ರಕಾರ, ಪಾಣಿಪತ್ ನಿವಾಸಿ ಕೃಷ್ಣ ಎಂಬುವರೊಂದಿಗೆ ‘ನಿವೃತ್ತಿ’ ಎಂಬ ಯುವತಿಯ ವಿವಾಹ ಮೂರು ತಿಂಗಳ ಹಿಂದೆ ನಡೆದಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಎರಡು ತಿಂಗಳ ಬಳಿಕ ತವರು ಮನೆಗೆ ತೆರಳಿದ ಆಕೆ, ಪತಿ ಅಥವಾ ಅತ್ತೆ ಮನೆಯವರ ಅನುಮತಿ ಅಥವಾ ಮಾಹಿತಿಯಿಲ್ಲದೆ ಗರ್ಭಪಾತ ಮಾಡಿಸಿಕೊಂಡು ವಾಪಸ್ಸಾಗಿದ್ದಳು. ಮನೆಗೆ ಮರಳಿದ ಬಳಿಕ ತನಗೆ ಸ್ವಾಭಾವಿಕವಾಗಿ ಗರ್ಭಪಾತವಾಗಿದೆ ಎಂದು ಹೇಳಿ ಕುಟುಂಬಸ್ಥರನ್ನು ನಂಬಿಸಿದ್ದಾಳೆ ಎನ್ನಲಾಗಿದೆ.
ಈ ಘಟನೆಯ ಕೆಲ ದಿನಗಳ ನಂತರ, ರಾತ್ರಿ ವೇಳೆ ಮನೆಯ ಎಲ್ಲರಿಗೂ ಚಹಾ ತಯಾರಿಸಿ ಅದರಲ್ಲಿ ನಿದ್ದೆ ಮಾತ್ರೆ ಬೆರೆಸಿದ್ದಾಳೆ ಎಂದು ಆರೋಪಿಸಲಾಗಿದೆ. ಚಹಾ ಸೇವಿಸಿದ ಬಳಿಕ ಕುಟುಂಬದ ಸದಸ್ಯರೆಲ್ಲರೂ ಗಾಢ ನಿದ್ರೆಗೆ ಜಾರಿದಾಗ, ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಬ್ಯಾಗ್ಗೆ ತುಂಬಿಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದಾಳೆ.
ಮರುದಿನ ಬೆಳಿಗ್ಗೆ ಕುಟುಂಬಸ್ಥರು ಎಚ್ಚರಗೊಂಡಾಗ ಮನೆಯಲ್ಲಿದ್ದ ಹಣ ಹಾಗೂ ಆಭರಣಗಳು ಕಾಣೆಯಾಗಿದ್ದು, ನಿವೃತ್ತಿಯೂ ನಾಪತ್ತೆಯಾಗಿರುವುದು ಗೊತ್ತಾಗಿದೆ. ಬಳಿಕ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೊಡ್ಡ ಬ್ಯಾಗ್ಗಳನ್ನು ಹೊತ್ತುಕೊಂಡು ಮಹಿಳೆ ರಾತ್ರಿ ಮನೆಯಿಂದ ಹೊರಟು ಹೋಗುತ್ತಿರುವ ದೃಶ್ಯಗಳು ದಾಖಲಾಗಿರುವುದು ಪತ್ತೆಯಾಗಿದೆ.
ಈ ಸಂಬಂಧ ಪತಿ ಕೃಷ್ಣ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇತರೆ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ. ಪರಾರಿಯಾಗಿರುವ ಮಹಿಳೆಯ ಪತ್ತೆಗೆ ವಿಶೇಷ ಶೋಧ ಕಾರ್ಯವೂ ನಡೆಯುತ್ತಿದೆ.
