ಬಳ್ಳಾರಿ: ಸಾರ್ವಜನಿಕರ ತೆರಿಗೆ ಹಣ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ (District Mineral Foundation – DMF) ನಿಧಿಯಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಸುಶ್ರುಷಾ ಶಾಲೆ (Government School of Nursing) ಕಟ್ಟಡವು ಕಳೆದ ಸುಮಾರು ಎರಡು ವರ್ಷಗಳಿಂದ ಬಳಕೆಯಾಗದೆ ಬೀಗ ಹಾಕಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಳ್ಳಾರಿ ನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ, ಇಂದಿರಾ ಕ್ಯಾಂಟೀನ್ ಪಕ್ಕದಲ್ಲೇ ಈ ಬೃಹತ್ ಕಟ್ಟಡ ನಿರ್ಮಾಣಗೊಂಡಿದೆ. ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ಈ ಕಟ್ಟಡ ಇಂದಿಗೂ ಕಾರ್ಯಾರಂಭವಾಗದೇ ಖಾಲಿ ಬಿದ್ದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಸ್ಥಳೀಯರ ಪ್ರಕಾರ, ಜಿಲ್ಲೆಯ ಆರೋಗ್ಯ ಸೇವೆ ಮತ್ತು ನರ್ಸಿಂಗ್ ಶಿಕ್ಷಣಕ್ಕೆ ನೆರವಾಗಬೇಕಿದ್ದ ಈ ಕಟ್ಟಡವನ್ನು ತಕ್ಷಣವೇ ಆರಂಭಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡಬೇಕಾಗಿತ್ತು. ಆದರೆ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದರೂ ಇದುವರೆಗೆ ಉದ್ಘಾಟನೆ ಅಥವಾ ಕಾರ್ಯಾರಂಭ ಮಾಡದೇ ಬೀಗ ಹಾಕಿರುವುದು ಆಡಳಿತದ ನಿರ್ಲಕ್ಷ್ಯವನ್ನು ಬಿಂಬಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನೊಂದು ಗಂಭೀರ ವಿಚಾರವೆಂದರೆ, ಕಾಮಗಾರಿಯ ವಿವರಗಳನ್ನು ಒಳಗೊಂಡ ನಾಮಫಲಕವನ್ನು ಸಹ ಅಳವಡಿಸಿಲ್ಲ. ಸಾಮಾನ್ಯವಾಗಿ ಸರ್ಕಾರಿ ಕಾಮಗಾರಿಗಳಲ್ಲಿ ಯೋಜನೆಯ ವೆಚ್ಚ, ಕಾಮಗಾರಿ ಕೈಗೊಂಡ ಇಲಾಖೆ, ಗುತ್ತಿಗೆದಾರರ ಹೆಸರು, ಭೂಮಿಪೂಜೆ ದಿನಾಂಕ ಹಾಗೂ ಕಾಮಗಾರಿ ಪೂರ್ಣಗೊಂಡ ದಿನಾಂಕದ ಮಾಹಿತಿ ಇರುವ ಫಲಕ ಕಡ್ಡಾಯವಾಗಿ ಇರಬೇಕು. ಆದರೆ ಈ ಕಟ್ಟಡದಲ್ಲಿ ಅಂತಹ ಯಾವುದೇ ಮಾಹಿತಿ ಫಲಕ ಕಾಣಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಸಾರ್ವಜನಿಕ ಹಣದಿಂದ ನಿರ್ಮಾಣವಾಗುವ ಅನೇಕ ಅಭಿವೃದ್ಧಿ ಕಾಮಗಾರಿಗಳು ಇದೇ ರೀತಿಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸಾರ್ವಜನಿಕರ ಹಣದಿಂದ ನಿರ್ಮಿಸಿದ ಕಟ್ಟಡಗಳು ವರ್ಷಗಳ ಕಾಲ ಬಳಕೆಯಾಗದೆ ಬಿದ್ದರೆ ಸರ್ಕಾರದ ಉದ್ದೇಶವೇ ವಿಫಲವಾಗುತ್ತದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ಸ್ಥಳೀಯರು ಹಾಗೂ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಮಧ್ಯಪ್ರವೇಶಿಸಿ ಕಟ್ಟಡವನ್ನು ತೆರೆಯುವ ಮೂಲಕ ಸರ್ಕಾರಿ ಸುಶ್ರುಷಾ ಶಾಲೆಯನ್ನು ಕಾರ್ಯಾರಂಭ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಕಾಮಗಾರಿಯ ಸಂಪೂರ್ಣ ವಿವರಗಳನ್ನು ಒಳಗೊಂಡ ನಾಮಫಲಕವನ್ನು ಅಳವಡಿಸಿ ಪಾರದರ್ಶಕತೆ ಕಾಪಾಡಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.
ಸಾರ್ವಜನಿಕರ ತೆರಿಗೆ ಹಣ ಮತ್ತು ಡಿಎಂಎಫ್ ನಿಧಿಯಿಂದ ನಿರ್ಮಾಣವಾಗಿರುವ ಈ ಕಟ್ಟಡ ಶೀಘ್ರದಲ್ಲೇ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬಳಕೆಗೆ ಬರಬೇಕೆಂಬುದು ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿದೆ.
ವರದಿ: ಹನುಮಂತ
