ಮುರ್ಡೇಶ್ವರ: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮಹಿಳೆಯ ಕುತ್ತಿಗೆಯಿಂದ ಬಂಗಾರದ ಚೈನ್ ಕಸಿದು ಪರಾರಿಯಾಗಿದ್ದ ಪ್ರಕರಣವನ್ನು ಮುರ್ಡೇಶ್ವರ ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸುಮಾರು ₹3 ಲಕ್ಷ ಮೌಲ್ಯದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಹಾಗೂ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಜುಲೈ 20, 2026ರ ರಾತ್ರಿ, ಪಿರ್ಯಾದಿದಾರರು ರಾಷ್ಟ್ರೀಯ ಹೆದ್ದಾರಿ-66ರ ಮೂಲಕ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ದೊಡ್ಡ ಬಲಸೆ ಕ್ರಾಸ್ ಸಮೀಪ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಕುತ್ತಿಗೆಯಲ್ಲಿದ್ದ ಸುಮಾರು 22 ಗ್ರಾಂ ತೂಕದ ಬಂಗಾರದ ಚೈನ್ ಅನ್ನು ಕಸಿದು ಪರಾರಿಯಾಗಿದ್ದರು. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 85/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 309(4)ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ, ಮಾಹಿತಿ ಆಧರಿಸಿ ಭಟ್ಕಳ ತಾಲೂಕಿನ ಹಲ್ಲಂದಿ, ಕಟಗಾರಕೊಪ್ಪ ನಿವಾಸಿಯಾದ ನಾಗರಾಜ (29), ತಂದೆ ಗಣಪತಿ ಗೊಂಡ ಎಂಬಾತನನ್ನು ಪ್ರಕರಣ ದಾಖಲಾದ 24 ಗಂಟೆಯೊಳಗೆ ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ಕಳವು ಮಾಡಿದ್ದ 22 ಗ್ರಾಂ ಬಂಗಾರದ ಚೈನ್, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಹಾಗೂ ಮೋಟಾರ್ ಸೈಕಲ್ ಸೇರಿ ಒಟ್ಟು ಅಂದಾಜು ₹3 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಈ ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. (IPS), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಭಟ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ ಬಿ. ಅವರ ಮಾರ್ಗದರ್ಶನದಲ್ಲಿ, ಮುರ್ಡೇಶ್ವರ ವೃತ್ತದ ಸಿಪಿಐ ಜಗದೀಶ ಹಂಚನಾಳ ಅವರ ನೇತೃತ್ವದಲ್ಲಿ ನಡೆಯಿತು. ಪೊಲೀಸ್ ಉಪನಿರೀಕ್ಷಕ ಹಣಮಂತ ಬಿರಾದಾರ ಹಾಗೂ ಠಾಣೆಯ ಸಿಬ್ಬಂದಿಗಳಾದ ಸುಬ್ರಹ್ಮಣ್ಯ ನಾಯ್ಕ, ಅರುಣ ಪಿಂಟೋ, ಮಂಜುನಾಥ ಲಕ್ಷ್ಮಾಪುರ, ಬಿಲಾಲ್ ಅಹ್ಮದ್ ಸಿದ್ದಾಪೂರ, ವಿಜಯ ನಾಯ್ಕ, ಮಹೇಶ ಸಮನಳ್ಳಿ, ಸಿದ್ದಪ್ಪ ಕಾಂಬಳೆ ಮತ್ತು ಸದಾಶಿವ ಕಟ್ಟಿಮನಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಕರಣವನ್ನು ಶೀಘ್ರವೇ ಭೇದಿಸಿ ಆರೋಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.
