ಸರಗೂರು: ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಶ್ರೀ ಚಿಕ್ಕದೇವಮ್ಮ ಬೆಟ್ಟದ ತಪ್ಪಲಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಾರ್ ಮತ್ತು ರೆಸ್ಟೋರೆಂಟ್ ಆರಂಭಿಸಲಾಗಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಅಧಿಕಾರಿಗಳು, ಭೂಮಾಲೀಕರು ಹಾಗೂ ಬಾರ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭಕ್ತರು ಸರಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಕೊತ್ತೇಗಾಲ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಅವರು ಕೃಷಿ ಭೂಮಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ತಿರುಚಿ (ಟ್ಯಾಂಪರ್) ಮತ್ತು ನಕಲಿ ದಾಖಲೆಗಳನ್ನು (ಫೋರ್ಜರಿ) ಸೃಷ್ಟಿಸುವ ಮೂಲಕ ಅಕ್ರಮವಾಗಿ ’11-ಬಿ’ ಫಾರಂ ನೀಡಿರುವ ಆರೋಪ ಕೇಳಿಬಂದಿದೆ. ಈ ಮೂಲಕ ಸರ್ಕಾರಕ್ಕೆ ವಂಚನೆ ಎಸಗಿರುವುದಲ್ಲದೆ, ಪವಿತ್ರ ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ಮತ್ತು ರೆಸ್ಟೋರೆಂಟ್ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆರೋಪಿಸಲಾಗಿದೆ.

ಭಕ್ತರ ಆರೋಪದಂತೆ, ಪಂಚಾಯಿತಿ ವ್ಯಾಪ್ತಿಗೆ ಸೇರದ ಲಕ್ಕೂರು ಗ್ರಾಮದ ಸರ್ವೇ ನಂ. 291ರ ಕೃಷಿ ಭೂಮಿಗೆ ಭೂ ಪರಿವರ್ತನೆ ಹಾಗೂ ಅಗತ್ಯ ಅನುಮತಿಗಳಿಲ್ಲದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಈ ಸಂಬಂಧ ದಾಖಲೆಗಳೊಂದಿಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಶ್ರೀ ಚಿಕ್ಕದೇವಮ್ಮ ಬೆಟ್ಟವು ಸಾವಿರಾರು ಭಕ್ತರು ಭೇಟಿ ನೀಡುವ ಪವಿತ್ರ ಕ್ಷೇತ್ರವಾಗಿದ್ದು, ಅದರ ಪಾವಿತ್ರ್ಯತೆ ಮತ್ತು ಪರಿಸರಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಬಾರ್ ನಡೆಸುತ್ತಿರುವುದು ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದ್ದರಿಂದ, ನಕಲಿ ದಾಖಲೆ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಅಧಿಕಾರಿಗಳು, ಭೂಮಾಲೀಕರು ಹಾಗೂ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ಚಿಕ್ಕದೇವಮ್ಮ ಬೆಟ್ಟದ ತಪ್ಪಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾರ್ ಅನ್ನು ಕೂಡಲೇ ತೆರವುಗೊಳಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಈ ವಿಷಯದಲ್ಲಿ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತ ಕೂಡ ಮಧ್ಯಪ್ರವೇಶಿಸಿ ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆ ಮತ್ತು ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಮನವಿ ಮಾಡಿದ್ದಾರೆ.

ಸೂಚನೆ: ಮೇಲಿನ ವರದಿಯಲ್ಲಿರುವ ಆರೋಪಗಳು ದೂರುದಾರರು ಸಲ್ಲಿಸಿರುವ ದೂರಿನ ಆಧಾರದಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಥವಾ ಆರೋಪಿಗಳ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.

Related News

error: Content is protected !!