ಗಾಂಧಿನಗರ: ವಿವಾಹಿತ ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಗುಪ್ತವಾಗಿ ಚಿತ್ರೀಕರಿಸಿ, ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದನೆಂಬ ಆರೋಪದ ಹಿನ್ನೆಲೆಯಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ದಂಪತಿ ಹತ್ಯೆ ಮಾಡಿರುವ ಘಟನೆ ಗುಜರಾತ್ನ ಗಾಂಧಿನಗರ ಜಿಲ್ಲೆಯ ಕಲೋಲ್ ತಾಲೂಕಿನಲ್ಲಿ ನಡೆದಿದೆ.
ಹತ್ಯೆಗೀಡಾದ ಯುವಕನನ್ನು ಹಾರ್ದಿಕ್ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಹಾರ್ದಿಕ್ ಆರೋಪಿಗಳ ಮನೆಯ ಸಮೀಪದಲ್ಲೇ ವಾಸಿಸುತ್ತಿದ್ದ. ಸುಮಾರು ಒಂದೂವರೆ ತಿಂಗಳಿನಿಂದ ಎರಡು ತಿಂಗಳ ಹಿಂದೆ ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಆತ ಗುಪ್ತವಾಗಿ ಚಿತ್ರೀಕರಿಸಿದ್ದ ಎನ್ನಲಾಗಿದೆ. ಬಳಿಕ ವಿಡಿಯೋವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಮಹಿಳೆಯನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಸಾಮಾಜಿಕ ಅಪಮಾನಕ್ಕೆ ಹೆದರಿ ಮಹಿಳೆ ಆತನ ಬೆದರಿಕೆಗೆ ಮಣಿದಿದ್ದಳು ಎನ್ನಲಾಗಿದೆ. ಮಹಿಳೆಯ ಪತಿ ಫ್ಯಾನ್ ದುರಸ್ತಿ ಹಾಗೂ ವಿದ್ಯುತ್ ವೈರಿಂಗ್ ಕೆಲಸ ಮಾಡುತ್ತಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ. ಘಟನೆ ಬಳಿಕವೂ ಹಾರ್ದಿಕ್ ನಿರಂತರವಾಗಿ ಮಹಿಳೆಗೆ ಬೆದರಿಕೆ ಹಾಕುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ನಡುವೆ ಮಹಿಳೆ ಹಾರ್ದಿಕ್ ಜತೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದುದನ್ನು ಗಮನಿಸಿದ ಪತಿ, ಆಕೆಯೊಂದಿಗೆ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಮಹಿಳೆ ತನ್ನ ಮೇಲೆ ನಡೆಯುತ್ತಿದ್ದ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ ಕುರಿತು ಪತಿಗೆ ಸಂಪೂರ್ಣ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಪತಿ, ಹಾರ್ದಿಕ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು, ಪತ್ನಿಯೂ ಅದಕ್ಕೆ ಸಹಕರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಯೋಜನೆಯಂತೆ ಜುಲೈ 11ರ ಬೆಳಿಗ್ಗೆ ಮಹಿಳೆ ಹಾರ್ದಿಕ್ಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಳು. ಪತಿ ಕೆಲಸಕ್ಕೆ ತೆರಳಿದಂತೆ ನಟಿಸಿ ಬೈಕ್ನಲ್ಲಿ ಮನೆಯಿಂದ ಹೊರಟಿದ್ದ.
ಬೆಳಿಗ್ಗೆ ಸುಮಾರು 9.10ರ ವೇಳೆಗೆ ಹಾರ್ದಿಕ್ ತನ್ನ ತಂದೆಗೆ ಕರೆ ಮಾಡಿ ಪರ್ಬತ್ಪುರ ಪ್ರದೇಶದಲ್ಲಿ ಜಮೀನು ನೋಡಲು ಹೋಗುತ್ತಿರುವುದಾಗಿ ತಿಳಿಸಿದ್ದ. ಆದರೆ, ಮಹಿಳೆಯ ಪತಿ ಮನೆಯಲ್ಲಿ ಇಲ್ಲವೆಂದು ಭಾವಿಸಿ ಆಕೆಯ ಮನೆಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಸಮಯದಲ್ಲಿ ದಂಪತಿಯ ಮೂವರು ಮಕ್ಕಳು ಶಾಲೆಗೆ ತೆರಳಿದ್ದರು. ಹಾರ್ದಿಕ್ ಮನೆಗೆ ಬಂದ ಬಳಿಕ ಪತಿ ಏಕಾಏಕಿ ಒಳಗೆ ಪ್ರವೇಶಿಸಿ ಆತನನ್ನು ಹಿಡಿದಿದ್ದಾನೆ. ಮಹಿಳೆ ಹಾರ್ದಿಕ್ನ ಕೈಗಳನ್ನು ಹಿಡಿದುಕೊಂಡಿದ್ದರೆ, ಪತಿ ತನ್ನ ಕುತ್ತಿಗೆಯಲ್ಲಿದ್ದ ಸ್ಕಾರ್ಫ್ನಿಂದ ಆತನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಫ್ಯಾನ್ನ ವಿದ್ಯುತ್ ಕೇಬಲ್ನಿಂದ ಮತ್ತೊಮ್ಮೆ ಕುತ್ತಿಗೆ ಬಿಗಿದು ಆತ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ದಂಪತಿ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಮನೆಗೆ ಬೀಗ ಹಾಕಿ ಬೈಕ್ನಲ್ಲಿ ಹೊರಟಿದ್ದಾರೆ. ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಮಹಿಳೆಯ ತಂದೆಯ ಮನೆಗೆ ಬಿಟ್ಟು, ನಗರದಿಂದ ಪರಾರಿಯಾಗಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ಹಾರ್ದಿಕ್ನ ತಂದೆ ರಮೇಶ್ಜಿ ಠಾಕೋರ್ ನೀಡಿದ ದೂರಿನ ಆಧಾರದ ಮೇಲೆ ಕಲೋಲ್ ತಾಲೂಕು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ದೃಢಪಟ್ಟಿದೆ.
ತನಿಖೆಯ ವೇಳೆ ಹಾರ್ದಿಕ್ ಮಹಿಳೆಯ ಸ್ನಾನದ ವಿಡಿಯೋ ಚಿತ್ರೀಕರಿಸಿ, ಅದನ್ನು ಆಧಾರವಾಗಿಟ್ಟುಕೊಂಡು ಲೈಂಗಿಕ ಸಂಬಂಧಕ್ಕೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದನೆಂಬ ಆರೋಪದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆದರೆ, ಆ ವಿಡಿಯೋವನ್ನು ಮಹಿಳೆ ಅಥವಾ ಆಕೆಯ ಪತಿ ಎಂದಿಗೂ ನೋಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಹಾರ್ದಿಕ್ನ ಮೊಬೈಲ್ ಫೋನ್ ಅನ್ನು ಮಹಿಳೆಯ ಪತಿ ಒಡೆದು ರಸ್ತೆ ಬದಿಗೆ ಎಸೆದಿದ್ದಾನೆ ಎನ್ನಲಾಗಿದೆ. ಮೊಬೈಲ್ ವಶಪಡಿಸಿಕೊಳ್ಳಲು ಆರೋಪಿಗಳ ಪೊಲೀಸ್ ಕಸ್ಟಡಿ ಕೋರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲೋಲ್ ತಾಲೂಕು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ದಂಪತಿಯನ್ನು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
