ದಾವಣಗೆರೆ ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರ ನಿರ್ದೇಶನದ ಮೇರೆಗೆ ಜಗಳೂರು ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 403 ಪಡಿತರ ಅಕ್ಕಿ ಚೀಲಗಳನ್ನು ಹಾಗೂ ಸಾಗಾಟಕ್ಕೆ ಬಳಸಲಾಗಿದ್ದ ಐಚರ್ ಕ್ಯಾಂಟರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಜಗಳೂರು ತಾಲೂಕಿನ ಕಾನನಕಟ್ಟೆ ಟೋಲ್ ಸಮೀಪ ಕೆಎ-16-ಡಿ-6845 ನೋಂದಣಿ ಸಂಖ್ಯೆಯ ಐಚರ್ ಕ್ಯಾಂಟರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ, ಸರ್ಕಾರದಿಂದ ಬಡವರಿಗೆ ಉಚಿತವಾಗಿ ವಿತರಿಸುವ 50 ಕೆಜಿ ತೂಕದ 403 ಪಡಿತರ ಅಕ್ಕಿ ಚೀಲಗಳು ಪತ್ತೆಯಾಗಿವೆ.
ಅಕ್ಕಿ ಚೀಲಗಳ ಮೇಲೆ “Government of Haryana” ಎಂದು ಮುದ್ರಿತವಾಗಿದ್ದು, ಸರ್ಕಾರದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಅನುಮಾನದ ಮೇರೆಗೆ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಲಾರಿ ಚಾಲಕನನ್ನು ಕೊಪ್ಪಳ ಜಿಲ್ಲೆಯ ವೀರೇಶ ನಿಂಗಪ್ಪ ಕುರ್ನಾಳ (26) ಎಂದು ಗುರುತಿಸಲಾಗಿದ್ದು, ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಮಾನ್ಯ ದಾಖಲೆಗಳನ್ನು ನೀಡಲು ಆತ ವಿಫಲನಾಗಿದ್ದಾನೆ. ವಿಚಾರಣೆ ವೇಳೆ ಗುರುರಾಜ ಪೋತನಾಳ ಹಾಗೂ ಸಿಂಗನಾಳ ಸುರೇಶ್ ಎಂಬುವರು ಅಕ್ಕಿ ಚೀಲಗಳನ್ನು ಲೋಡ್ ಮಾಡಿರುವುದಾಗಿ ಆತ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಜಗಳೂರು ತಾಲೂಕು ಆಹಾರ ನಿರೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 403 ಪಡಿತರ ಅಕ್ಕಿ ಚೀಲಗಳು ಹಾಗೂ ಐಚರ್ ಕ್ಯಾಂಟರ್ ಲಾರಿಯನ್ನು ಜಪ್ತಿ ಮಾಡಲಾಗಿದ್ದು, ಅಕ್ರಮ ಜಾಲದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಕಾರ್ಯಾಚರಣೆಯನ್ನು ಜಗಳೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ರಾಮಯ್ಯ ಬಿ.ಎಂ. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪಕ್ಷಣ್ಣ, ನಾಗರಾಜಯ್ಯ, ನಾಗರಾಜ ಹಾಗೂ ನಾಗಭೂಷಣ ಯಶಸ್ವಿಯಾಗಿ ನಡೆಸಿದರು.
ಕರ್ತವ್ಯನಿಷ್ಠೆಯಿಂದ ಕಾರ್ಯಾಚರಣೆ ಯಶಸ್ವಿಗೊಳಿಸಿದ ಪೊಲೀಸ್ ತಂಡವನ್ನು ದಾವಣಗೆರೆ ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ., ಐಪಿಎಸ್ ಅಭಿನಂದಿಸಿ ಪ್ರಶಂಸಿಸಿದ್ದಾರೆ.
