ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಆತಂಕ ಮೂಡಿಸುವ ಘಟನೆ ಬೆಳಕಿಗೆ ಬಂದಿದೆ. ಪಾರ್ಸೆಲ್ ವಿತರಿಸಲು ಬಂದಿದ್ದ ಡೆಲಿವರಿ ಬಾಯ್ ಮಹಿಳೆಯ ಅನುಮತಿ ಇಲ್ಲದೇ ಫ್ಲ್ಯಾಟ್ಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣಕ್ಕೆ ತ್ವರಿತವಾಗಿ ಸ್ಪಂದಿಸಲಾಗಿದೆ.
ಬಂಧಿತ ಆರೋಪಿಯನ್ನು ವಿಜಯ್ ಮಲ್ಲಿಕಾರ್ಜುನ ಕಾಮತ್ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75, 79 ಹಾಗೂ 329(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಏನಾಯಿತು?
ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಪಾರ್ಸೆಲ್ ವಿತರಿಸಲು ಬಂದಿದ್ದ ಡೆಲಿವರಿ ಬಾಯ್ ಮನೆಯ ಶೌಚಾಲಯ ಬಳಸಲು ಅವಕಾಶ ಕೇಳಿದ್ದಾನೆ. ಅಪರಿಚಿತರಿಗೆ ಮನೆಯೊಳಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಮಹಿಳೆ ಸೌಜನ್ಯದಿಂದ ನಿರಾಕರಿಸಿ, ಬೇರೆ ಫ್ಲ್ಯಾಟ್ನಲ್ಲಿ ಕೇಳುವಂತೆ ಸೂಚಿಸಿದ್ದಾಳೆ.
ಆದರೆ, ಮಹಿಳೆಯ ನಿರಾಕರಣೆಯ ನಡುವೆಯೂ ಆತ ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿ ಶೌಚಾಲಯಕ್ಕೆ ಹೋಗಿದ್ದಾನೆ. ಬಳಿಕ ಅಸಭ್ಯವಾಗಿ ಖಾಸಗಿ ಅಂಗ ಪ್ರದರ್ಶಿಸಿ ಮಹಿಳೆಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಘಟನೆಗೆ ಆಘಾತಗೊಂಡ ಮಹಿಳೆ ಆತನನ್ನು ಪ್ರಶ್ನಿಸಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸಿಸಿಟಿವಿ ಹಾಗೂ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಘಟನೆ ಬಳಿಕ ಮನೆಯಲ್ಲಿ ಇದ್ದರೂ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಮಹಿಳೆ ಬೇಸರ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Horrifying incident in Bengaluru: A Flipkart/Myntra delivery agent forced his way into a woman’s (@/nilofer_vlogs) flat against her clear refusals and exposed himself inside her home. This requires immediate action! @BlrCityPolice
— Daku Incel Singh (@nightbeatsdrop) July 11, 2026
(Re-uploading this after editing out the ✏️ flash… pic.twitter.com/730aVT2Bs4
ಫ್ಲಿಪ್ಕಾರ್ಟ್ ಪ್ರತಿಕ್ರಿಯೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಫ್ಲಿಪ್ಕಾರ್ಟ್, ಆರೋಪಿಯ ವರ್ತನೆ ಸಂಪೂರ್ಣವಾಗಿ ಖಂಡನೀಯವಾಗಿದ್ದು, ಪ್ರಕರಣದ ಮಾಹಿತಿ ದೊರಕುತ್ತಿದ್ದಂತೆಯೇ ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.
ಗ್ರಾಹಕರ, ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಕಂಪನಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಪೊಲೀಸ್ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಇದೇ ವೇಳೆ, ಮುಂದಿನ ದಿನಗಳಲ್ಲಿ ಡೆಲಿವರಿ ಸಿಬ್ಬಂದಿಯ ಹಿನ್ನೆಲೆ ಪರಿಶೀಲನೆ ಸೇರಿದಂತೆ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು. ಗ್ರಾಹಕರ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ವರ್ತನೆಯನ್ನು ಸಹಿಸುವುದಿಲ್ಲ ಎಂದು ಫ್ಲಿಪ್ಕಾರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
