ಮುರ್ಡೇಶ್ವರ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಜೀವಕ್ಕೆ ಅಪಾಯ ಉಂಟುಮಾಡಲು ಯತ್ನಿಸಿದ ಆರೋಪದಡಿ ಮುರ್ಡೇಶ್ವರ ಪೊಲೀಸರು ಯುವಕನೊಬ್ಬನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸದ್ಯ ಆತ ಕಾರವಾರ ಜಿಲ್ಲಾ ಕಾರಾಗೃಹದಲ್ಲಿದ್ದಾನೆ.
ಮಾವಳ್ಳಿ-02 ನಿವಾಸಿ ಗಣೇಶ ಜಯಂತ ನಾಯ್ಕ (24) ನೀಡಿದ ದೂರಿನ ಮೇರೆಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಜುಲೈ 3ರಂದು ಮಧ್ಯಾಹ್ನ ಸುಮಾರು 2.20ರ ವೇಳೆಗೆ ಗಣೇಶ ನಾಯ್ಕ ಅವರು ಬ್ಯಾಂಕ್ ಕೆಲಸದ ನಿಮಿತ್ತ ತಮ್ಮ ಕಾರಿನಲ್ಲಿ ಬಸ್ತಿ ರಸ್ತೆಯ ಮೂಲಕ ಮುರ್ಡೇಶ್ವರದತ್ತ ತೆರಳುತ್ತಿದ್ದರು. ಈ ವೇಳೆ ಪಿ.ಎನ್.ಇ. ಶೋರೂಮ್ ಸಮೀಪ ದೀವಗಿರಿ ನಿವಾಸಿ ಹೃತೀಕ ಮಂಜುನಾಥ ನಾಯ್ಕ (26) ತನ್ನ ಕಾರನ್ನು ಅತಿವೇಗವಾಗಿ ಚಲಾಯಿಸಿ ಅವರ ವಾಹನದತ್ತ ನುಗ್ಗಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಡಿಕ್ಕಿಯಿಂದ ತಪ್ಪಿಸಿಕೊಳ್ಳಲು ಗಣೇಶ ನಾಯ್ಕ ಅವರು ಕಾರಿನ ವೇಗ ಹೆಚ್ಚಿಸಿದರೂ, ಆರೋಪಿಯು ಹಿಂಬದಿಯಿಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ಕಾಂಪೌಂಡ್ ಗೋಡೆಗೆ ಅಪ್ಪಳಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕೃತ್ಯವು ಉದ್ದೇಶಪೂರ್ವಕವಾಗಿದ್ದು, ಹಿಂದಿನಿಂದಲೂ ಇದ್ದ ವೈಯಕ್ತಿಕ ದ್ವೇಷವೇ ಘಟನೆಗೆ ಕಾರಣ ಎಂದು ದೂರುದಾರ ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಮುರ್ಡೇಶ್ವರ ಪೊಲೀಸರು ತನಿಖೆ ನಡೆಸಿ ಆರೋಪಿ ಹೃತೀಕ ಮಂಜುನಾಥ ನಾಯ್ಕನನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಪಿಎಸ್‌ಐ ಹಣಮಂತ ಬಿರಾದಾರ ಅವರ ನೇತೃತ್ವದಲ್ಲಿ ಮುಂದುವರಿಸಲಾಗಿದೆ.
