ಧಾರವಾಡ: ಪತ್ನಿ ದೈಹಿಕವಾಗಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಅಮಾನುಷ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ.
ಹಣಸಿ ಗ್ರಾಮದ ಪ್ರಿಯಾಂಕಾ ಕಮಲಾಕರ್ (29) ಮೃತ ಮಹಿಳೆ. ಪ್ರಕರಣ ಸಂಬಂಧ ಪತಿ ಬಸವರಾಜ್ ವಡ್ಡರ್ ಸೇರಿದಂತೆ ರೇಣವ್ವ, ಸುಭಾಷ್ ಮತ್ತು ಸಿದ್ದರಾಮೇಶ್ ಎಂಬ ನಾಲ್ವರನ್ನು ನವಲಗುಂದ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರಿಯಾಂಕಾ ಮತ್ತು ಬಸವರಾಜ್ರ ವಿವಾಹ 2024ರಲ್ಲಿ ನಡೆದಿತ್ತು. ಮದುವೆಯ ಆರಂಭಿಕ ದಿನಗಳಲ್ಲಿ ದಾಂಪತ್ಯ ಜೀವನ ಸಾಮಾನ್ಯವಾಗಿದ್ದರೂ, ಬಳಿಕ ಪತ್ನಿಯ ದೈಹಿಕ ತೂಕದ ವಿಚಾರವಾಗಿ ಬಸವರಾಜ್ ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆಕೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದರ ಜೊತೆಗೆ ಕುಟುಂಬ ಯೋಜನೆ ಮತ್ತು ಮಗು ವಿಚಾರವಾಗಿಯೂ ದಂಪತಿ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಸೋಮವಾರ ರಾತ್ರಿ ಇದೇ ವಿಷಯವಾಗಿ ಗಲಾಟೆ ನಡೆದಿದ್ದು, ಜಗಳ ತೀವ್ರಗೊಂಡ ವೇಳೆ ಆಕ್ರೋಶಗೊಂಡ ಬಸವರಾಜ್ ಪತ್ನಿಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ ಪೊಲೀಸರು ಮುಖ್ಯ ಆರೋಪಿ ಬಸವರಾಜ್ನನ್ನು ಬಂಧಿಸಿದ್ದಾರೆ. ಜೊತೆಗೆ, ಕೊಲೆ ಪ್ರಕರಣಕ್ಕೆ ಸಹಕಾರ ಮತ್ತು ಪ್ರಚೋದನೆ ನೀಡಿದ ಆರೋಪದ ಮೇಲೆ ಉಳಿದ ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೇವಲ ದೈಹಿಕ ರೂಪ ಮತ್ತು ತೂಕದ ಕಾರಣಕ್ಕೆ ಮಹಿಳೆಯನ್ನು ಪತಿಯೇ ಹತ್ಯೆ ಮಾಡಿರುವ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಮಹಿಳೆಯರ ಮೇಲಿನ ಗೃಹ ಹಿಂಸಾಚಾರದ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
