ಚಿಕ್ಕಬಳ್ಳಾಪುರ ಜಿಲ್ಲೆಯ ಯುವ ಫಿಜಿಯೋಥೆರಪಿ ವೈದ್ಯೆಯೊಬ್ಬರ ನಿಗೂಢ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪ್ರಕರಣದ ತನಿಖೆ ತೀವ್ರಗೊಂಡಿದೆ. ಸುರಭಿ ಎಂಬ ಯುವತಿ ಹೋಂಸ್ಟೇ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಪ್ರಿಯಕರ ಸಂಜೀತ್ ಆಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮುದ್ದೇನಹಳ್ಳಿ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ ವೈದ್ಯೆಯಾಗಿದ್ದ ಸುರಭಿ, ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ತರಬೇತಿ ಸಂದರ್ಭದಲ್ಲಿ ಕೇರಳ ಮೂಲದ ಕ್ಯಾಬ್ ಚಾಲಕ ಸಂಜೀತ್ ಆಲಿಯ ಪರಿಚಯ ಮಾಡಿಕೊಂಡಿದ್ದರು. ಪ್ರತಿದಿನ ಪಿಕಪ್ ಹಾಗೂ ಡ್ರಾಪ್ ವೇಳೆ ಆರಂಭವಾದ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

ಪ್ರೀತಿ ಸಂಬಂಧದ ಹಿನ್ನೆಲೆ ಇಬ್ಬರೂ ಮನೆ ಬಿಟ್ಟು ತೆರಳಿದ್ದರಿಂದ ಪೋಷಕರು ಮಿಸ್ಸಿಂಗ್ ಪ್ರಕರಣವನ್ನೂ ದಾಖಲಿಸಿದ್ದರು. ಆದರೆ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಸುರಭಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸಂಜೀತ್ ಆಲಿ ವಿರುದ್ಧ ದೂರು ನೀಡಿದ್ದಳು ಎಂದು ತಿಳಿದುಬಂದಿದೆ. ಕಳೆದ ಆರು ತಿಂಗಳಿನಿಂದ ಇಬ್ಬರೂ ದೂರವಾಗಿದ್ದರೂ, ಇತ್ತೀಚೆಗೆ ಮತ್ತೆ ಸಂಪರ್ಕ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.

ಎರಡು ದಿನಗಳ ಹಿಂದೆ ಮುದ್ದೇನಹಳ್ಳಿ ಸಮೀಪದ ಹೋಂಸ್ಟೇನಲ್ಲಿ ಸಂಜೀತ್ ಆಲಿ ಕೊಠಡಿ ಬುಕ್ ಮಾಡಿದ್ದನು. ಅಲ್ಲಿಗೆ ತೆರಳಿದ್ದ ಸುರಭಿ ಬಳಿಕ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನಾ ಸ್ಥಳದಲ್ಲಿ ಆಕೆ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಡ್ರಗ್ಸ್ ಸೇವನೆ ಹಾಗೂ ಗಲಾಟೆ ನಡೆದಿರುವ ಶಂಕೆಯೂ ವ್ಯಕ್ತವಾಗಿದೆ.

ಇನ್ನೊಂದೆಡೆ ಅಸ್ವಸ್ಥಗೊಂಡಿದ್ದ ಸಂಜೀತ್ ಆಲಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಸುರಭಿ ಬರೆದಿದ್ದ ಡೈರಿಯೊಂದು ಪತ್ತೆಯಾಗಿದ್ದು, ತನಿಖೆಗೆ ಮಹತ್ವದ ಸಾಕ್ಷಿಯಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳ ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಘಟನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆತ್ಮಹತ್ಯೆಯೋ ಅಥವಾ ಬೇರೆ ಕಾರಣವೋ ಎಂಬುದು ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಸ್ಪಷ್ಟವಾಗಲಿದೆ.

Related News

error: Content is protected !!