ರಾಜಸ್ಥಾನದ ಡುಂಗರಪುರ ಜಿಲ್ಲೆಯ ಬಿಚ್ಚಿವಾಡ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೃದ್ಧ ದೂರುದಾರನ ಎದುರು ಮಹಿಳಾ ಕಾನ್‌ಸ್ಟೇಬಲ್ ಅಸಭ್ಯವಾಗಿ ವರ್ತಿಸಿದ ಫೋಟೋ ವೈರಲ್ ಆದ ಬೆನ್ನಲ್ಲೇ ಸಂಬಂಧಿತ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಮಹಿಳಾ ಕಾನ್‌ಸ್ಟೇಬಲ್ ಅನ್ನು ರೀನಾ ಗರ್ಗ್ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ವಯೋವೃದ್ಧ ವ್ಯಕ್ತಿಯೊಬ್ಬರು ತಮ್ಮ ಸಮಸ್ಯೆಗೆ ಸಂಬಂಧಿಸಿದಂತೆ ದೂರು ನೀಡಲು ಬಿಚ್ಚಿವಾಡ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ರೀನಾ ಗರ್ಗ್, ದೂರನ್ನು ಆಲಿಸುವ ಬದಲು ಮೇಜಿನ ಮೇಲೆ ಎರಡೂ ಕಾಲುಗಳನ್ನು ಇಟ್ಟುಕೊಂಡು ಕುಳಿತಿರುವುದು ಫೋಟೋದಲ್ಲಿ ಕಂಡುಬಂದಿದೆ.
ವೃದ್ಧ ವ್ಯಕ್ತಿಯ ಎದುರು ಕನಿಷ್ಠ ಗೌರವವೂ ತೋರಿಸದ ರೀತಿಯಲ್ಲಿ ವರ್ತಿಸಿರುವುದನ್ನು ಅಲ್ಲಿದ್ದ ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಫೋಟೋ ವೈರಲ್ ಆದ ಬಳಿಕ ಸಾರ್ವಜನಿಕರು ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಲವರು ಇದನ್ನು ಅಧಿಕಾರದ ದುರುಪಯೋಗ ಹಾಗೂ ಸಾರ್ವಜನಿಕರ ಅವಮಾನ ಎಂದು ಟೀಕಿಸಿದರು.

ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಡುಂಗರಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕುಮಾರ್ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ಲೋಪ ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಕಾನ್‌ಸ್ಟೇಬಲ್ ರೀನಾ ಗರ್ಗ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಈ ಘಟನೆ, ಸಾರ್ವಜನಿಕ ಸೇವೆಯಲ್ಲಿ ಇರುವ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆಯಬಾರದು ಎಂಬ ಸಂದೇಶ ನೀಡುವುದರ ಜೊತೆಗೆ, ಸೋಷಿಯಲ್ ಮೀಡಿಯಾ ಇಂದಿನ ದಿನಗಳಲ್ಲಿ ಹೊಣೆಗಾರಿಕೆಯನ್ನು ನೆನಪಿಸುವ ಪ್ರಬಲ ವೇದಿಕೆಯಾಗಿರುವುದನ್ನೂ ಮತ್ತೊಮ್ಮೆ ಸಾಬೀತುಪಡಿಸಿದೆ.
