ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17 ವರ್ಷದ ಸೋದರಳಿಯನನ್ನು ಕಳೆದ ಎರಡೂವರೆ ವರ್ಷಗಳಿಂದ ಬೆದರಿಕೆ ಹಾಕಿ ಲೈಂಗಿಕವಾಗಿ ಶೋಷಣೆ ನಡೆಸಿದ ಆರೋಪದ ಮೇಲೆ 40 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಮಹಿಳೆ ಬಾಲಕನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ ಆತನನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸುತ್ತಿದ್ದಳು. ಈ ಬೆದರಿಕೆಯನ್ನು ಬಳಸಿಕೊಂಡು ಸುಮಾರು ಎರಡೂವರೆ ವರ್ಷಗಳಿಂದ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.

ಇತ್ತೀಚಿನ ದಿನಗಳಲ್ಲಿ ಆರೋಪಿ ಮಹಿಳೆ ಬಾಲಕನ ಮೇಲೆ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ. ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದ ಬಳಲುತ್ತಿದ್ದ ಬಾಲಕನ ಆರೋಗ್ಯ ಹದಗೆಟ್ಟಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿ ಮಹಿಳೆಯನ್ನು ಪೋಕ್ಸೋ (POCSO) ಕಾಯ್ದೆಯಡಿ ಬಂಧಿಸಿದ್ದಾರೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಎಲ್ಲಾ ಆರೋಪಗಳ ಸತ್ಯಾಸತ್ಯತೆ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Related News

error: Content is protected !!