ಕಡೂರು: ತಾಲೂಕಿನ ಹಳ್ಳಿಯೊಂದರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂವರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಶಿಕ್ಷಣ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಶಾಲೆಯ ಶಿಕ್ಷಕ ನಾಗರಾಜಪ್ಪ ಅವರು ಮೂವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿಯರಿಂದ ಮನೆಯಿಂದ ಮೊಬೈಲ್ ಫೋನ್ ತರಿಸಿಕೊಂಡು ಅಶ್ಲೀಲ ವಿಡಿಯೋಗಳು ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ, ವಿದ್ಯಾರ್ಥಿನಿಯರು ಧರಿಸಿದ್ದ ಬಟ್ಟೆಗಳ ಬಗ್ಗೆ ಪ್ರಶ್ನಿಸಿ ಅನಗತ್ಯವಾಗಿ ಪರಿಶೀಲನೆ ನಡೆಸುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ಮಕ್ಕಳಿಗೆ ಬೆದರಿಕೆ ಹಾಕಿ ದೇವರ ಮೇಲೆ ಆಣೆ ಮಾಡಿಸಿಕೊಂಡಿದ್ದಾನೆ ಎಂದು ಬಾಲಕಿಯರು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಕುರಿತು ಪೋಷಕರು ಶಾಲೆಯ ಮುಖ್ಯೋಪಾಧ್ಯಾಯ ಲೋಕೇಶಪ್ಪ ಅವರ ಗಮನಕ್ಕೆ ತಂದಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಮೂವರು ಬಾಲಕಿಯರಿಂದ ಪ್ರತ್ಯೇಕವಾಗಿ ನೀಡಲಾದ ದೂರುಗಳ ಆಧಾರದ ಮೇಲೆ ಯಗಟಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕ ನಾಗರಾಜಪ್ಪ ಹಾಗೂ ಮುಖ್ಯೋಪಾಧ್ಯಾಯ ಲೋಕೇಶಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಗಳ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
