ಕಲಬುರಗಿ: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಪೊಲೀಸ್ ಇಲಾಖೆಯ ಇಬ್ಬರು ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ ಮುದರಡ್ಡಿ ಹಾಗೂ ಕಾನ್ಸ್ಟೇಬಲ್ ಬಸವರಾಜ್ ಬಿರಾದಾರ್ ಅವರು ₹50 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ದಾಳಿಗೆ ಸಿಲುಕಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಮಾಹಿತಿಯ ಪ್ರಕಾರ, ಆನಂದ ಕುಸ್ತಿ ಎಂಬುವರಿಗೆ ಅಕ್ಕಿ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡುವುದಾಗಿ ಹೇಳಿ ಇಬ್ಬರು ಅಧಿಕಾರಿಗಳು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಅದರ ಆಧಾರದ ಮೇಲೆ ಬಲೆ ಬೀಸಲಾಗಿತ್ತು.

ಯೋಜನೆಯಂತೆ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪಿಎಸ್‌ಐ ಮತ್ತು ಕಾನ್ಸ್ಟೇಬಲ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಪಿಎಸ್‌ಐ ವಿಶ್ವನಾಥ ಮುದರಡ್ಡಿ ಅವರನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ಮುಂದಿನ ತನಿಖೆಯನ್ನು ಲೋಕಾಯುಕ್ತ ಅಧಿಕಾರಿಗಳು ಮುಂದುವರಿಸಿದ್ದಾರೆ.

Related News

error: Content is protected !!