ರಾಯಚೂರು: ಖಾಸಗಿ ಶಾಲೆಯ ಮಾನ್ಯತೆ ನವೀಕರಣ ಮಾಡಿಕೊಡುವುದಕ್ಕಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ (ಡಿಡಿಪಿಐ) ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಹೊರವಲಯದಲ್ಲಿರುವ ನೂತನ ಜಿಲ್ಲಾಡಳಿತ ಭವನದ ಡಿಡಿಪಿಐ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಾಬಲೇಶ್ವರ ಎಂಬುವವರು ಬಂಧಿತ ಆರೋಪಿಯಾಗಿದ್ದಾರೆ. ಖಾಸಗಿ ಶಾಲೆಯ ಮಾನ್ಯತೆ ನವೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಅವರು ಒಟ್ಟು ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಎಸ್. ವಿದ್ಯಾಜ್ಯೋತಿ ಖಾಸಗಿ ಶಾಲೆಯ ಪರವಾಗಿ ನವೀಕರಣ ಪತ್ರ ಪಡೆಯಲು ಸಿದ್ದಣ್ಣ ರಾಂಪುರ ಹಲವು ಬಾರಿ ಕಚೇರಿಗೆ ಭೇಟಿ ನೀಡಿದ್ದರೂ ಕೆಲಸ ವಿಳಂಬವಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಮಹಾಬಲೇಶ್ವರ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈಗಾಗಲೇ ₹25 ಸಾವಿರವನ್ನು ಪಡೆದಿದ್ದರು ಎಂದು ತಿಳಿದುಬಂದಿದೆ.
ಉಳಿದ ₹15 ಸಾವಿರವನ್ನು ಇಂದು ಸಿದ್ದಣ್ಣ ಅವರಿಂದ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಲೆಗೆ ಬೀಳಿಸಿದ್ದಾರೆ.
ಲಂಚದ ಬೇಡಿಕೆಯಿಂದ ಬೇಸತ್ತ ಸಿದ್ದಣ್ಣ ರಾಂಪುರ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಡಿವೈಎಸ್ಪಿಗಳಾದ ಪಾವಡ ಹಾಗೂ ರವಿ ಪುರುಷೋತ್ತಮ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
