ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಾಲ್ಲೂಕಿನ ನಂದಿಗಿರಿಧಾಮ ಪೊಲೀಸ್ ಠಾಣೆಯ ಎಎಸ್‌ಐ ಗಂಗರಾಜು ಹಾಗೂ ಪೊಲೀಸ್ ಕಾನ್ಸ್ಟೇಬಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ಭದ್ರತಾ ಕರ್ತವ್ಯಕ್ಕಾಗಿ ಕಾಲೇಜು ಗೇಟ್ ಬಳಿ ನಿಯೋಜಿತರಾಗಿದ್ದರು. ಈ ವೇಳೆ ಕೆಲವು ವಿದ್ಯಾರ್ಥಿಗಳು ಸೈಲೆನ್ಸರ್ ಬದಲಾಯಿಸಿದ್ದ ಬೈಕ್‌ಗಳಲ್ಲಿ ಕರ್ಕಶ ಶಬ್ದ ಮಾಡುತ್ತಾ ಓಡಾಡುತ್ತಿದ್ದರು ಎನ್ನಲಾಗಿದೆ.

ವಿದ್ಯಾರ್ಥಿಗಳಿಗೆ ಎಎಸ್‌ಐ ಗಂಗರಾಜು ಶಾಂತವಾಗಿ ತೆರಳುವಂತೆ ಸೂಚನೆ ನೀಡಿದರೂ, ಒಬ್ಬ ವಿದ್ಯಾರ್ಥಿ ಪೊಲೀಸರ ಮಾತನ್ನು ಲೆಕ್ಕಿಸದೆ ಮತ್ತೆ ಬೈಕ್ ಜೋರಾಗಿ ಸೌಂಡ್ ಮಾಡಿದ್ದಾನೆ. ಇತರ ವಿದ್ಯಾರ್ಥಿಗಳು ತಡೆಯಲು ಯತ್ನಿಸಿದರೂ “ಪೊಲೀಸ್ ಏನು ಮಾಡ್ತಾನೆ?” ಎಂದು ಸವಾಲು ಹಾಕಿದಂತೆ ವರದಿಯಾಗಿದೆ.

ಇದರಿಂದ ಕೋಪಗೊಂಡ ಎಎಸ್‌ಐ ಗಂಗರಾಜು ಲಾಠಿ ಬೀಸಿದ್ದು, ವಿದ್ಯಾರ್ಥಿಗೆ ಗಾಯವಾಗಿ ರಕ್ತ ಬಂದಿದೆ ಎನ್ನಲಾಗಿದೆ. ಇದರಿಂದ ಕೆರಳಿದ ವಿದ್ಯಾರ್ಥಿಗಳು ಗುಂಪಾಗಿ ಎಎಸ್‌ಐ ಮೇಲೆ ಹಲ್ಲೆ ನಡೆಸಿದ್ದಾರೆ. ಮಧ್ಯೆ ಪ್ರವೇಶಿಸಿ ಬಿಡಿಸಲು ಬಂದ ಕಾನ್ಸ್ಟೇಬಲ್‌ನನ್ನೂ ನೂಕಾಡಿ ಹಲ್ಲೆ ಮಾಡಿದ್ದಾರೆ. ಈ ದೃಶ್ಯಗಳನ್ನು ಅಲ್ಲಿದ್ದ ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಇದೀಗ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ, “ಪೊಲೀಸರ ಮೇಲೆ ಹಲ್ಲೆ ನಡೆದಿರುವುದು ಸತ್ಯ. ಸೈಲೆನ್ಸರ್ ಬದಲಾಯಿಸಿದ ಬೈಕ್‌ಗಳಿಂದ ವಿದ್ಯಾರ್ಥಿಗಳು ಶಬ್ದ ಮಾಲಿನ್ಯ ಮಾಡುತ್ತಿದ್ದರು. ಅವರಿಗೆ ಬುದ್ದಿವಾದ ಹೇಳುವ ವೇಳೆ ಮಾತಿನ ಚಕಮಕಿ ನಡೆದು ಘಟನೆ ನಡೆದಿದೆ. ಪೊಲೀಸರು ಯಾರಿಗೂ ರಕ್ತ ಬರುವಂತೆ ಹೊಡೆದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಖಾಕಿ ಉಡುಪಿನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಿದ್ಯಾರ್ಥಿಗಳ ಈ ರೌಡಿಶೈಲಿ ವರ್ತನೆ ಪೊಲೀಸರ ಜೊತೆಗೆ ಸಾರ್ವಜನಿಕರನ್ನೂ ಬೆಚ್ಚಿಬೀಳುವಂತೆ ಮಾಡಿದೆ.

Related News

error: Content is protected !!