ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್‌ಎನ್ ವೆಂಕಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಕೊಪ್ಪಳದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದರು. ರವಿ, ಮೈಲಾರಿ, ಧನರಾಜ್, ಭೀಮಾ, ಸಲೀಂ ಮತ್ತು ಗಂಗಾಧರ ಗೌಳಿ ಶಿಕ್ಷೆಗೆ ಗುರಿಯಾದವರು.

ನಗರದ ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದ ವೆಂಕಟೇಶ್ ಅವರ ಕ್ರೂರ ಹತ್ಯೆ ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ, ನ್ಯಾಯಾಲಯ ಅಪರಾಧದ ಗಂಭೀರತೆ ಮತ್ತು ಕ್ರೌರ್ಯವನ್ನು ಪರಿಗಣಿಸಿ ಇದನ್ನು “ಅಪರೂಪದಲ್ಲಿ ಅಪರೂಪದ ಪ್ರಕರಣ” ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಗಂಗಾವತಿ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದ ಮಾರುತಿ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ವೆಂಕಟೇಶ್ ಪ್ರಮುಖ ಸಾಕ್ಷಿಯಾಗಿದ್ದರು. ಅಲ್ಲದೆ, ಗಾಯಗೊಂಡ ಮಾರುತಿಗೆ ಚಿಕಿತ್ಸೆ ಸಿಗುವವರೆಗೆ ಬೆಂಬಲವಾಗಿ ನಿಂತಿದ್ದರು. ಈ ಕಾರಣದಿಂದಲೇ ಆರೋಪಿಗಳು ವೆಂಕಟೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಇದಕ್ಕೂ ಮುನ್ನವೇ ಆರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಲಾಗಿದ್ದು, ಶಿಕ್ಷೆಯ ಪ್ರಮಾಣ ಕಾಯ್ದಿರಿಸಲಾಗಿತ್ತು. ಇದೀಗ ಅಂತಿಮ ತೀರ್ಪಿನಲ್ಲಿ ಮರಣದಂಡನೆ ವಿಧಿಸಲಾಗಿದೆ. ಶಿಕ್ಷೆಗೆ ಒಳಗಾದವರು ಅಗತ್ಯವಿದ್ದರೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸರ್ಕಾರಿ ಅಭಿಯೋಜಕಿ ಎಸ್. ನಾಗಲಕ್ಷ್ಮಿ, ನ್ಯಾಯಾಲಯದ ತೀರ್ಪು ಸಮಾಜದಲ್ಲಿ ಕಾನೂನು ಮೇಲ್ವಿಚಾರಣೆಯ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳುತ್ತದೆ ಎಂದು ಹೇಳಿದರು.

Related News

error: Content is protected !!