ಗುರುಗ್ರಾಮ: ನಿಶ್ಚಿತ ವಧುವನ್ನು ಭೇಟಿಯಾಗುವ ನಿರೀಕ್ಷೆಯಲ್ಲಿ ಇದ್ದ ಯುವಕನೊಬ್ಬ, ಲೈಂಗಿಕ ಉತ್ತೇಜಕ ಮಾತ್ರೆಗಳನ್ನು ಮಿತಿಮೀರಿ ಸೇವಿಸಿದ ಪರಿಣಾಮ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ನಾಗ್ಪುರ ಮೂಲದ 29 ವರ್ಷದ ರೋಹಿತ್ ಲಾಲ್ ಮೃತ ವ್ಯಕ್ತಿ. ಇವರು ದೆಹಲಿಯ ‘ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

ಗುರುವಾರ ಬೆಳಿಗ್ಗೆ ಸಹೋದ್ಯೋಗಿಯ ಕರೆಗಳಿಗೆ ಪ್ರತಿಕ್ರಿಯಿಸದಿದ್ದರಿಂದ ಅನುಮಾನಗೊಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ರೋಹಿತ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೊಠಡಿಯಲ್ಲಿ ಲೈಂಗಿಕ ಉತ್ತೇಜಕ ಮಾತ್ರೆಗಳ ಖಾಲಿ ಪ್ಯಾಕೆಟ್‌ಗಳು ಹಾಗೂ ವಿವಿಧ ಆರೋಗ್ಯ ಪೂರಕಗಳೂ ಪತ್ತೆಯಾಗಿವೆ.

ಪ್ರಾಥಮಿಕ ತನಿಖೆ ಪ್ರಕಾರ, ತನ್ನ ನಿಶ್ಚಿತ ವಧುವನ್ನು ಭೇಟಿಯಾಗುವ ಮುನ್ನ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಮಾತ್ರೆಗಳನ್ನು ಅತಿಯಾಗಿ ಸೇವಿಸಿರುವುದೇ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹದ ವಿಸೇರಾವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಂತಿಮ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ.

ವೈದ್ಯರ ಸಲಹೆಯಿಲ್ಲದೆ ಇಂತಹ ಔಷಧಿಗಳನ್ನು ಸೇವಿಸುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಎಚ್ಚರಿಕೆಯಾಗಿದೆ.

Related News

error: Content is protected !!