ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿಯಾಗುವುದಿಲ್ಲ ಎಂಬ ಮಾತು ಮತ್ತೊಮ್ಮೆ ಸತ್ಯವಾಗಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. 37 ವರ್ಷದ ಮಹಿಳೆ, ತನ್ನಿಗಿಂತ 15 ವರ್ಷ ಕಿರಿಯ 22 ವರ್ಷದ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದು, ಮನೆ ಬಿಟ್ಟು ಪರಾರಿಯಾಗಿ ಮದುವೆಯಾಗಿರುವುದು ಗಮನ ಸೆಳೆದಿದೆ.
ಬೆಂಗಳೂರಿನ ಚಲ್ಲಘಟ್ಟ ನಿವಾಸಿ ಕವಿತಾ ಹಾಗೂ ಮೈಸೂರಿನ ರಮ್ಮನಹಳ್ಳಿ ಮೂಲದ ಭಾಸ್ಕರ್ ನಡುವೆ ಪರಿಚಯ ಪ್ರೀತಿಗೆ ತಿರುಗಿದದ್ದು ದೇವಸ್ಥಾನ ಭೇಟಿಗಳ ವೇಳೆ ಎಂದು ತಿಳಿದುಬಂದಿದೆ. ಆಟೋ ಚಾಲಕನಾಗಿದ್ದ ಭಾಸ್ಕರ್, ಕವಿತಾ ಹಾಗೂ ಆಕೆಯ ತಾಯಿ ಭಾಗ್ಯಮ್ಮಳನ್ನು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಿದ್ದಾಗ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು.
ಇದಕ್ಕೂ ಮುನ್ನವೇ ಕವಿತಾ ವಿವಾಹಿತೆಯಾಗಿದ್ದು, ಎಂಟು ವರ್ಷಗಳ ಹಿಂದೆ ಗಂಡ ಮೃತಪಟ್ಟಿದ್ದಾನೆ. ಈ ದಂಪತಿಗೆ 14 ವರ್ಷದ ಮಗನಿದ್ದಾನೆ. ಗಂಡನ ಸಾವಿನ ನಂತರ ಹೌಸ್ಕೀಪಿಂಗ್ ಕೆಲಸ ಮಾಡುತ್ತಾ ತವರು ಮನೆಯಲ್ಲೇ ವಾಸಿಸುತ್ತಿದ್ದ ಕವಿತಾ, ಈಗ ಪ್ರೇಮಿಗಾಗಿ ಮಗನನ್ನೇ ಬಿಟ್ಟು ಮನೆ ತೊರೆದಿದ್ದಾಳೆ.
ಕುಟುಂಬದವರು ಕವಿತಾಳಿಗೆ ಮತ್ತೊಂದು ಮದುವೆ ಮಾಡಲು ಮುಂದಾಗುತ್ತಿದ್ದ ಹಿನ್ನೆಲೆ, ಆಕೆ ಭಾಸ್ಕರ್ ಜೊತೆ ಮೈಸೂರಿಗೆ ತೆರಳಿ, ಒಂಟಿಕೊಪ್ಪಲು ವೆಂಕಟೇಶ್ವರ ದೇವಸ್ಥಾನದಲ್ಲಿ ಗುಟ್ಟಾಗಿ ವಿವಾಹವಾಗಿದ್ದಾಳೆ ಎಂದು ತಿಳಿದುಬಂದಿದೆ.
ಇತ್ತ, ಕವಿತಾಳ ತಂದೆ ಮಲ್ಲಿಕಾರ್ಜುನ್ ಅವರು ಬೆಂಗಳೂರಿನ ಕುಂಬಳಗೋಡು ಠಾಣೆಯಲ್ಲಿ ಮಗಳ ಅಪಹರಣದ ಬಗ್ಗೆ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ, ಕವಿತಾ ಹಾಗೂ ಭಾಸ್ಕರ್ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿದ್ದು, ವಿಶೇಷವಾಗಿ ಸಂಬಂಧಿಕರಿಂದ ಬೆದರಿಕೆ ಬರುತ್ತಿದೆ ಎಂದು ತಿಳಿಸಿದ್ದಾರೆ.
ಜೀವಭಯದಿಂದ ಬೆಂಗಳೂರು ಬಿಟ್ಟು ಮೈಸೂರಿಗೆ ಬಂದಿರುವ ಈ ಜೋಡಿ, ಈಗ ರಕ್ಷಣೆ ಕೋರಿ ಮೈಸೂರು ಎಸ್ಪಿ ಕಚೇರಿಗೆ ಭೇಟಿ ನೀಡಿ ಪೊಲೀಸರ ಮೊರೆ ಹೋಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
