ಹುಬ್ಬಳ್ಳಿ: ಪ್ರೀತಿ ಹೆಸರಿನಲ್ಲಿ ಯುವತಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಯುವಕನಿಗೆ, ಯುವತಿ ಮತ್ತು ಆಕೆಯ ಪೋಷಕರು ಸಾರ್ವಜನಿಕರ ಮುಂದೆ ಚಪ್ಪಲಿಯಿಂದ ಹೊಡೆದ ಘಟನೆ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ನಗರದ ಶಿಗ್ಗಾಂವಿ ಪ್ಲಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ‘ಬಿಗ್ ಬಾಸ್’ ಹೆಸರಿನ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಯುವತಿಯನ್ನು ಪ್ರೀತಿಸಬೇಕೆಂದು ಒತ್ತಾಯಿಸುತ್ತಿದ್ದನೆಂದು ತಿಳಿದುಬಂದಿದೆ. ಯುವತಿ ನಿರಾಕರಿಸಿದ್ದರೂ, ಅವಳನ್ನು ಹಿಂಬಾಲಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಯುವಕನ ವರ್ತನೆ ತಾಳಲಾರದೆ ಯುವತಿ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಯುವತಿ ಮತ್ತು ಪೋಷಕರು ನೇರವಾಗಿ ಯುವಕ ಕೆಲಸ ಮಾಡುತ್ತಿದ್ದ ಸಲೂನ್ಗೆ ತೆರಳಿ, ಆತನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ತೀವ್ರಗೊಂಡು, ಆಕ್ರೋಶಗೊಂಡ ಯುವತಿ ಮತ್ತು ಪೋಷಕರು ಯುವಕನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.
ಸಾರ್ವಜನಿಕರ ಸಮ್ಮುಖದಲ್ಲೇ ನಡೆದ ಈ ಘಟನೆ ಸ್ಥಳೀಯರಲ್ಲಿ ಸಂಚಲನ ಮೂಡಿಸಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ವಿದ್ಯಾನಗರ ಮತ್ತು ಗೋಕುಲ ರಸ್ತೆ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಪ್ರಕರಣ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದ್ದು, ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
