ನವದೆಹಲಿ: ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದು ಎಂದರೆ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಅರ್ಥೈಸಿಕೊಳ್ಳಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ Amit Shah ಲೋಕಸಭೆಯಲ್ಲಿ ಸ್ಪಷ್ಟಪಡಿಸಿದರು.
ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, “ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅದು ಧರ್ಮಾಧಾರಿತ ಮೀಸಲಾತಿಯಾಗುತ್ತದೆ. ಆದರೆ ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಅವಕಾಶವಿಲ್ಲ” ಎಂದು ಹೇಳಿದರು.
ಇದಕ್ಕೂ ಮೊದಲು ಸಮಾಜವಾದಿ ಪಕ್ಷದ ಸಂಸದರಾದ Akhilesh Yadav ಮತ್ತು Dharmendra Yadav ಮುಸ್ಲಿಂ ಸಮುದಾಯಕ್ಕೂ ಮೀಸಲಾತಿ ನೀಡಬೇಕು ಎಂದು ವಾದಿಸಿದ್ದರು.
ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ ಅಮಿತ್ ಶಾ ಸುಮಾರು 40 ನಿಮಿಷಗಳ ಕಾಲ ಭಾಷಣ ಮಾಡಿ, ವಿರೋಧ ಪಕ್ಷಗಳ ನಾಯಕರನ್ನು ಕಟುವಾಗಿ ಟೀಕಿಸಿದರು. “ನಾವು ಮಹಿಳಾ ಮೀಸಲಾತಿ ಜಾರಿಗೆ ತರಲು ಸಿದ್ಧರಾಗಿದ್ದೇವೆ. ಸಮಾಜವಾದಿ ಪಕ್ಷಕ್ಕೆ ಇಷ್ಟವಿದ್ದರೆ ತಮ್ಮ ಎಲ್ಲಾ ಕ್ಷೇತ್ರಗಳಲ್ಲಿ ಮುಸ್ಲಿಂ ಮಹಿಳೆಯರಿಗೇ ಟಿಕೆಟ್ ನೀಡಲಿ” ಎಂದು ಕಿಚಾಯಿಸಿದರು.
ತಮ್ಮ ಭಾಷಣದಲ್ಲಿ ಜಾತಿ ಜನಗಣತಿಯ ವಿಷಯವನ್ನೂ ಉಲ್ಲೇಖಿಸಿದ ಶಾ, “ಸಮಾಜವಾದಿ ಪಕ್ಷದವರು ಜಾತಿ ಗಣತಿ ಬೇಕೆಂದು ಹೇಳುತ್ತಿದ್ದಾರೆ. ಆದರೆ 2027ರ ಜನಗಣತಿಯ ಜೊತೆ ಜಾತಿ ಗಣತಿಯನ್ನೂ ನಡೆಸಲಾಗುತ್ತದೆ ಎಂಬುದನ್ನು ಅವರಿಗೆ ತಿಳಿದಿಲ್ಲವೆನ್ನಿಸುತ್ತದೆ. ಈಗಾಗಲೇ ಮನೆಗಳ ಗಣತಿ ನಡೆದಿದೆ” ಎಂದು ಹೇಳಿದರು.
ಮುಂದುವರಿದು, “ಜಾತಿ ಗಣತಿ ನಡೆಸಿಯೇ ನಡೆಸುತ್ತೇವೆ. ನನಗೂ ವೈಯಕ್ತಿಕವಾಗಿ ಅದರಲ್ಲಿ ಕುತೂಹಲವಿದೆ” ಎಂದು ವಿರೋಧ ಪಕ್ಷದ ನಾಯಕರನ್ನು ವ್ಯಂಗ್ಯವಾಗಿ ಟೀಕಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ Arjun Ram Meghwal ಹಾಗೂ ಅಮಿತ್ ಶಾ ಅವರು ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದರು.
ಆದರೆ, ಈ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಸಂವಿಧಾನ ವಿರೋಧಿ ಕ್ರಮ ಎಂದು ಆರೋಪಿಸಿ ಸದನದಲ್ಲಿ ತೀವ್ರ ಪ್ರತಿಭಟನೆ ನಡೆಸಿದವು.
ಇಂದು ಮಂಡನೆಯಾದ ಮಸೂದೆಗಳಲ್ಲಿ ಸಂವಿಧಾನ (131ನೇ ತಿದ್ದುಪಡಿ) ಮಸೂದೆ–2026, ಕ್ಷೇತ್ರ ಮರುವಿಂಗಡಣೆ ಮಸೂದೆ–2026 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ–2026 ಸೇರಿವೆ.
