ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಬ್ಲಾಕ್ಮೇಲ್ ಹಾಗೂ ಕಿರುಕುಳ ತಾಳಲಾರದೆ ಯುವ ಜಿಮ್ ಟ್ರೈನರ್ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಳಕಿಗೆ ಬಂದಿದೆ. ದಿಲೀಪ್ (28) ಮೃತ ಯುವಕನಾಗಿದ್ದು, ಸಾವಿಗೆ ಮುನ್ನ ಮಹಿಳೆಗೆ ವಿಡಿಯೋ ಕಾಲ್ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತಿಳಿಸಿದ್ದಾನೆ ಎಂಬುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ನೆಲಮಂಗಲ ತಾಲೂಕಿನ ವಾಜರಹಳ್ಳಿ ನಿವಾಸಿಯಾಗಿದ್ದ ದಿಲೀಪ್ ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದರು. ಅವರು ಕೆಲಸ ಮಾಡುತ್ತಿದ್ದ ಜಿಮ್ಗೆ ಫಿಟ್ನೆಸ್ಗಾಗಿ ಬರುತ್ತಿದ್ದ ಯೋಗಿತಾ ಎಂಬ ವಿವಾಹಿತ ಮಹಿಳೆಯೊಂದಿಗೆ ಪರಿಚಯ ಬೆಳೆದಿತ್ತು. ಈ ಪರಿಚಯ ನಂತರ ಸಲುಗೆಗೆ ತಿರುಗಿ, ಇಬ್ಬರ ಮಧ್ಯೆ ಆತ್ಮೀಯ ಸಂಬಂಧ ರೂಪುಗೊಂಡಿತ್ತು ಎನ್ನಲಾಗಿದೆ.
ಈ ಸಂಬಂಧದ ವಿಚಾರವು ಒಂದು ವರ್ಷ ಹಿಂದೆಯೇ ಪೊಲೀಸ್ ಠಾಣೆ ಮಟ್ಟಿಗೆ ಹೋಗಿ ಬಳಿಕ ರಾಜಿ ಸಮಾಧಾನಗೊಂಡಿತ್ತು. ಆದರೂ ಕೂಡ, ಯೋಗಿತಾ ದಿಲೀಪ್ಗೆ ನಿರಂತರವಾಗಿ ಬ್ಲಾಕ್ಮೇಲ್ ಮಾಡುತ್ತಾ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.
ಮೃತ ದಿಲೀಪ್ ತಂದೆ ರಮೇಶ್ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಅವರ ಪ್ರಕಾರ, ಯೋಗಿತಾ ತನ್ನ ಮಗನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು, ದಿಲೀಪ್ ಹೆಸರಿನಲ್ಲಿದ್ದ ಮನೆಯನ್ನು ತನ್ನ ಮಗನ ಹೆಸರಿಗೆ ಬರೆಸಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದಳು. ಈ ಕಿರುಕುಳದಿಂದ ಬೇಸತ್ತು ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ದೂರಿದ್ದಾರೆ.
ಸಾವಿಗೆ ಮುನ್ನ ದಿಲೀಪ್ ಯೋಗಿತಾಳಿಗೆ ವಿಡಿಯೋ ಕಾಲ್ ಮಾಡಿದ್ದಾನೆ ಎನ್ನಲಾಗಿದ್ದು, ಈ ವಿಷಯ ತಿಳಿದ ಯೋಗಿತಾ ದಿಲೀಪ್ ಸಹೋದರಿಗೆ ಇನ್ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿದ್ದಾಳೆ. ತಕ್ಷಣ ಕುಟುಂಬಸ್ಥರು ಮನೆ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ದಿಲೀಪ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿಲೀಪ್ ಮೊಬೈಲ್ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.
