ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರಮುಖ ಐಟಿ ಸೇವಾ ಕಂಪನಿಗೆ ಸಂಬಂಧಿಸಿದ ಬಿಪಿಒ ಘಟಕದಲ್ಲಿ ಗಂಭೀರ ಆರೋಪಗಳು ಬೆಳಕಿಗೆ ಬಂದಿವೆ. ಉದ್ಯೋಗಿಗಳ ಮೇಲೆ ಲೈಂಗಿಕ ಕಿರುಕುಳ, ಕೆಲಸದ ಸ್ಥಳದ ಶೋಷಣೆ ಹಾಗೂ ಬಲವಂತದ ಘಟನೆಗಳು ನಡೆದಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ದೂರು ಮಾರ್ಚ್ 25 ರಂದು ದಾಖಲಾಗಿದ್ದು, ಮುಂಬೈ ನಾಕಾ ಪ್ರದೇಶದಲ್ಲಿರುವ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಕಿರುಕುಳ ಅನುಭವಿಸಿದ್ದಾಗಿ ಯುವತಿಯೊಬ್ಬಳು ಡಿಯೋಲಾಲಿ ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಲವು ವರ್ಷಗಳಿಂದ ಲೈಂಗಿಕ ದುರುಪಯೋಗ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯ ವರ್ತನೆ ನಡೆದಿರುವುದಾಗಿ ಅವರು ಆರೋಪಿಸಿದ್ದಾರೆ.
ತನಿಖೆ ಮುಂದುವರಿದಂತೆ, ಇನ್ನಷ್ಟು ಸಂತ್ರಸ್ತರು ಮುಂದೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಏಪ್ರಿಲ್ 3 ರೊಳಗೆ ಒಟ್ಟು ಎಂಟು ಮಹಿಳೆಯರು ಹಾಗೂ ಒಬ್ಬ ಪುರುಷ ನೀಡಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಒಂಬತ್ತು ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಕೆಲವು ಸಂತ್ರಸ್ತರು ವೇತನ ಹೆಚ್ಚಳ ಮತ್ತು ಉದ್ಯೋಗ ಭದ್ರತೆಗಾಗಿ ನಮಾಜ್ ಮಾಡಲು ಹಾಗೂ ಗೋಮಾಂಸ ಸೇವಿಸಲು ಒತ್ತಾಯಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಈ ಆರೋಪಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಇದನ್ನಾಧರಿಸಿ, ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶವನ್ನು ಬಹಿರಂಗಪಡಿಸಲು ಕ್ರಮ ಕೈಗೊಂಡಿದೆ. ಏಳು ಅಧಿಕಾರಿಗಳನ್ನು ಒಳಗೊಂಡ ಈ ತಂಡದಲ್ಲಿ ಮೂವರು ಮಹಿಳಾ ಅಧಿಕಾರಿಗಳೂ ಇದ್ದು, ಅವರು ಸಂತ್ರಸ್ತರ ವಿಶ್ವಾಸ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಎಸ್‌ಐಟಿ ರಹಸ್ಯ ಕಾರ್ಯಾಚರಣೆ ನಡೆಸಿ ಹಲವು ಮಹತ್ವದ ಪುರಾವೆಗಳನ್ನು ಸಂಗ್ರಹಿಸಿದ್ದು, ತನಿಖೆಯ ಆಧಾರದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವ ಪ್ರಕ್ರಿಯೆ ಆರಂಭವಾಗಿದೆ.
ಇದಕ್ಕೂ ಮಧ್ಯೆ, ಈ ಘಟನೆ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದ್ದು, ಕೆಲವು ರಾಜಕೀಯ ನಾಯಕರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರಕರಣದ ಅಂತಿಮ ಸತ್ಯಾಂಶಕ್ಕಾಗಿ ತನಿಖೆ ಇನ್ನೂ ಮುಂದುವರೆದಿದೆ.
