ಆಂಧ್ರಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಿರಿಯ ಹೈಕೋರ್ಟ್ ವಕೀಲರು ದಾರುಣವಾಗಿ ಮೃತಪಟ್ಟಿದ್ದಾರೆ. ಸಿಮೆಂಟ್ ತುಂಬಿದ ಟ್ಯಾಂಕರ್ ಲಾರಿ ಚಲಿಸುತ್ತಿದ್ದ BMW ಕಾರಿನ ಮೇಲೆ ಪಲ್ಟಿಯಾಗಿ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ.
ಮೃತರನ್ನು ಬಿ. ಶ್ರೀನಿವಾಸ ರಾವ್ ಎಂದು ಗುರುತಿಸಲಾಗಿದೆ. ಅವರು ಅಮರಾವತಿಯಲ್ಲಿ ನಡೆದ ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ಭಾಗವಹಿಸಿ, ಬಳಿಕ ತಮ್ಮ BMW ಕಾರಿನಲ್ಲಿ ಹೈದರಾಬಾದ್ ಕಡೆಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಕೀಸರ ಟೋಲ್ ಗೇಟ್ ದಾಟುತ್ತಿದ್ದ ವೇಳೆ, ಅತಿವೇಗದಲ್ಲಿ ಬಂದ ಸಿಮೆಂಟ್ ಟ್ಯಾಂಕರ್ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ. ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗುರುತಿಸಲು ಕಷ್ಟವಾಗುವಷ್ಟು ಹಾನಿಗೊಂಡಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಟೋಲ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಜೆಸಿಬಿ ಮತ್ತು ಕ್ರೇನ್ ಸಹಾಯದಿಂದ ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಲಾರಿಯನ್ನು ತೆರವುಗೊಳಿಸಿ, ವಕೀಲರ ಮೃತದೇಹವನ್ನು ಹೊರತೆಗೆದಿದ್ದಾರೆ.
ಈ ಕುರಿತು ವಿಜಯವಾಡ ಪೊಲೀಸ್ ಆಯುಕ್ತ ಎಸ್.ವಿ. ರಾಜಶೇಖರ ಬಾಬು ಪ್ರತಿಕ್ರಿಯಿಸಿ, “ಟ್ಯಾಂಕರ್ನ ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು” ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಲಾರಿಯಲ್ಲಿ ಅತಿಯಾದ ಭಾರವಿತ್ತೇ ಅಥವಾ ಚಾಲಕನ ನಿರ್ಲಕ್ಷ್ಯವೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.
ಅಪಘಾತದ ಪರಿಣಾಮವಾಗಿ ಹೈದರಾಬಾದ್–ವಿಜಯವಾಡ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕಂಚಿಕಚರ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
