ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ, ಖಾತಾ ಮ್ಯೂಟೇಶನ್‌ಗೆ ಲಂಚ ಬೇಡಿಕೆ ಇಟ್ಟ ಆರೋಪದಡಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. 2 ಲಕ್ಷ ರೂಪಾಯಿ ಲಂಚ ಕೇಳಿದ್ದರೆಂಬ ದೂರಿನ ಆಧಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಸಿರವಾರ ಪಟ್ಟಣದ ಹೊಸ ಲೇಔಟ್‌ನ 34 ನಿವೇಶನಗಳ ಖಾತಾ ಮ್ಯೂಟೇಶನ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಲೇಔಟ್ ಮಾಲೀಕ ರಘರಾಮ್ ರೆಡ್ಡಿಯಿಂದ ಸುರೇಶ್ ಶೆಟ್ಟಿ ಲಂಚ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ನಿನ್ನೆ ರಘರಾಮ್ ರೆಡ್ಡಿ ಅವರು 1 ಲಕ್ಷ ರೂಪಾಯಿ ಹಣವನ್ನು ನೀಡುವ ವೇಳೆ ದಾಳಿ ನಡೆಸಿದರು. ಆದರೆ ದಾಳಿ ವೇಳೆ ಸುರೇಶ್ ಶೆಟ್ಟಿ ಹಣ ಸಮೇತ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ.

ಪರಾರಿಯಾದ ಶೆಟ್ಟಿ, ಸಿರವಾರದಿಂದ ಕವಿತಾಳ ಕಡೆಗೆ ತೆರಳಿ ತನ್ನ ಸ್ನೇಹಿತರ ಮನೆಯಲ್ಲಿ ಅಡಗಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಲೋಕಾಯುಕ್ತ ತಂಡ, ಮೊಬೈಲ್ ಲೊಕೇಶನ್ ಟ್ರೇಸ್ ಮೂಲಕ ಕವಿತಾಳ ಪಟ್ಟಣದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ.

ಸಿನಿಮೀಯ ಶೈಲಿಯಲ್ಲಿ ನಡೆದ ಈ ಕಾರ್ಯಾಚರಣೆ ಗಮನ ಸೆಳೆದಿದ್ದು, ಸದ್ಯ ಸುರೇಶ್ ಶೆಟ್ಟಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

Related News

error: Content is protected !!