ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದಾ ನಿಗೂಢವಾಗಿ ನಾಪತ್ತೆಯಾಗಿದ್ದ ಘಟನೆ ದುಃಖಾಂತ್ಯ ಕಂಡಿದೆ. ಐದು ದಿನಗಳ ಬಳಿಕ ಆಕೆಯ ಶವ ಬಾಬಾ ಬುಡನ್‌ಗಿರಿ ಬಳಿ 1500 ಅಡಿ ಆಳದ ಕಣಿವೆಯಲ್ಲಿ ಪತ್ತೆಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಪ್ರಪಾತಕ್ಕೆ ಬಿದ್ದು ಸಾವಿಗೀಡಾಗಿರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ. ಆದರೆ, ಬಾಲಕಿಯ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿರುವ ಕುಟುಂಬಸ್ಥರು, ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಇದರ ನಡುವೆ, ಪ್ರಾಥಮಿಕ ಮರಣೋತ್ತರ ವರದಿ ಹೊರಬಿದ್ದಿದ್ದು, ಯಾವುದೇ ಅಸಹಜತೆ ಕಂಡುಬಂದಿಲ್ಲ ಎಂದು ತಿಳಿಸಿದೆ. ವರದಿಯ ಪ್ರಕಾರ, ತಲೆಯ ಬಲಭಾಗಕ್ಕೆ ಬಿದ್ದ ಗಂಭೀರ ಗಾಯವೇ ಸಾವಿಗೆ ಕಾರಣವಾಗಿದೆ. ದೇಹದ ಹಲವು ಭಾಗಗಳಲ್ಲಿ ಗಾಯಗಳು ಹಾಗೂ ಮೂಳೆ ಮುರಿತಗಳು ಕಂಡುಬಂದಿದ್ದು, ಮೇಲಿನಿಂದ ಬಿದ್ದ ಪರಿಣಾಮವೇ ಇದಕ್ಕೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಶ್ರೀನಂದಾಳ ಮೃತದೇಹವನ್ನು ಕುಟುಂಬಸ್ಥರು ಸ್ವಗ್ರಾಮಕ್ಕೆ ಕೊಂಡೊಯ್ದಿದ್ದು, ಇಂದು ಅಂತ್ಯಕ್ರಿಯೆ ನಡೆಯಲಿದೆ. ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳು ಪತ್ತೆಯಾಗಿಲ್ಲದ ಕಾರಣ, ಇದು ಕೊಲೆ ಪ್ರಕರಣವಲ್ಲ ಎಂಬುದಾಗಿ ಪ್ರಾಥಮಿಕವಾಗಿ ನಿರ್ಧರಿಸಲಾಗಿದೆ. ಹುಡುಕಾಟದ ವೇಳೆ ಮಧ್ಯಾಹ್ನ ಸುಮಾರು 12 ಗಂಟೆಗೆ ಶವ ಪತ್ತೆಯಾಗಿದ್ದು, ಬಟ್ಟೆಗಳು ಹರಿದು ಹೋಗಿರುವುದು ಮತ್ತು ಮರದ ಕೊಂಬೆಗಳಿಗೆ ತಗುಲಿ ಗಾಯಗೊಂಡಿರುವುದು ಗಮನಕ್ಕೆ ಬಂದಿದೆ.

ಶ್ರೀನಂದಾಳ ಶವ ಪತ್ತೆಗೆ ಪೊಲೀಸರು, ಅರಣ್ಯ ಇಲಾಖೆ ಮತ್ತು ವಿಪತ್ತು ನಿರ್ವಹಣಾ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ಘಟನೆ ನಡೆದ ಸ್ಥಳದಲ್ಲೇ ಪೊಲೀಸರು ಪರಿಶೀಲನೆ ನಡೆಸಿದ್ದು, ಬಾಲಕಿಯ ತಂದೆಯ ಸಮ್ಮುಖದಲ್ಲಿಯೂ ತನಿಖೆ ಮುಂದುವರಿಸಲಾಯಿತು.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ದಯಾಮ್, “ಕುಟುಂಬದ ಅನುಮಾನಗಳನ್ನೂ ಗಮನದಲ್ಲಿಟ್ಟುಕೊಂಡು ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗುತ್ತಿದೆ. ಯಾವುದೇ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ” ಎಂದು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:
ಶ್ರೀನಂದಾ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕದಂಬಜಿಪುರಂ ನಿವಾಸಿಗಳಾದ ರಮೇಶ್ ಗೋಪಾಲನ್ ಮತ್ತು ರೋಹಿಣಿ ದಂಪತಿಯ ಪುತ್ರಿ. ಸುಮಾರು 40 ಜನರ ಪ್ರವಾಸಿ ತಂಡದೊಂದಿಗೆ ಕಳೆದ ಶನಿವಾರ ಕರ್ನಾಟಕಕ್ಕೆ ಆಗಮಿಸಿದ್ದರು. ಏಪ್ರಿಲ್ 7ರಂದು ಸಂಜೆ 5:20ರ ಸುಮಾರಿಗೆ ಕುಟುಂಬದೊಂದಿಗೆ ಫೋಟೋ ತೆಗೆಸಿಕೊಂಡಿದ್ದ ಶ್ರೀನಂದಾ, ಕೇವಲ 15 ನಿಮಿಷಗಳಲ್ಲಿ (5:35ಕ್ಕೆ) ನಾಪತ್ತೆಯಾಗಿದ್ದು, ಕುಟುಂಬದಲ್ಲಿ ಭಾರೀ ಆತಂಕ ಮೂಡಿಸಿತ್ತು.

ತೀವ್ರ ಹುಡುಕಾಟದ ಮೂರನೇ ದಿನದಂದು ಆಕೆಯ ಶವ ಪತ್ತೆಯಾಗಿದ್ದು, ಈ ಘಟನೆ ಕುಟುಂಬದವರನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ.

Related News

error: Content is protected !!