ರಾಜ್ಯದಲ್ಲಿ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. “ಸರ್ಕಾರಿ ಕೆಲಸ ದೇವರ ಕೆಲಸ” ಎಂಬ ನಂಬಿಕೆಗೆ ಧಕ್ಕೆ ತರುವಂತೆ, ಜನಸೇವೆಗೆ ಬಂದ ಕೆಲ ಅಧಿಕಾರಿಗಳು ಜನಸಾಮಾನ್ಯರ ಬಳಿ ಲಂಚದ ಬೇಡಿಕೆ ಇಡುವ ಘಟನೆಗಳು ಮುಂದುವರಿಯುತ್ತಿವೆ. ಈಗಾಗಲೇ ಅನೇಕ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರೂ, ಕೆಲವರು ಪಾಠ ಕಲಿಯದೇ ಅದೇ ದಾರಿಯಲ್ಲಿ ಮುಂದುವರಿಯುತ್ತಿರುವುದು ದುಃಖಕರ.

ಇದೇ ಹಿನ್ನೆಲೆದಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುವಾಗ ಇಬ್ಬರು ಪೊಲೀಸ್ ಪೇದೆಗಳು ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾರುತಿ ಬ್ಯಾಳಿ ಮತ್ತು ಚಂದಾಲಿಂಗ್ ಮೇಳೆ ಎಂಬ ಪೇದೆಗಳು, ಅಟ್ರಾಸಿಟಿ ಪ್ರಕರಣವೊಂದರಲ್ಲಿ ಜಾಮೀನು ಕೊಡಿಸುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಮೆಹಬೂಬ್ ಪಾಶಾ ಎಂಬ ವ್ಯಕ್ತಿಯಿಂದ ಫೋನ್‌ಪೇ ಮೂಲಕ ₹15,000 ಹಣವನ್ನು ಪಡೆದಿದ್ದ ಆರೋಪವೂ ಇವರ ಮೇಲೆ ಇದೆ. ಬಳಿಕ ₹3,000 ಹಣವನ್ನು ಸ್ವೀಕರಿಸುವ ವೇಳೆ, ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತದ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯುತ್ತಿದ್ದು, ಇಂತಹ ಘಟನೆಗಳು ಇತರ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕಾಗಿದೆ.

Related News

error: Content is protected !!