ರಾಜಧಾನಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ಕ್ಷುಲ್ಲಕ ವಿಚಾರದಿಂದ ಆರಂಭವಾದ ದಂಪತಿಗಳ ಜಗಳ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಬೆಳಗಾವಿ ಮೂಲದ ಕಾವ್ಯಾ (34) ಕೊಲೆಯಾದ ದುರ್ದೈವಿ ಮಹಿಳೆ. ಪತ್ನಿಯನ್ನು ಹತ್ಯೆಗೈದ ಆರೋಪದ ಮೇಲೆ ಪತಿ ದರಿಯಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೂಲತಃ ಬೆಳಗಾವಿಯವರಾದ ಈ ದಂಪತಿಗಳು ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ದರಿಯಪ್ಪ ಗುತ್ತಿಗೆ ಕೆಲಸ ಮಾಡುತ್ತಿದ್ದನು. ದಂಪತಿಗಳಿಗೆ ಇಬ್ಬರು ಮಕ್ಕಳು ಇದ್ದು, ಕಳೆದ ಒಂದು ವಾರದಿಂದ ಹಣಕಾಸು ಮತ್ತು ಆಸ್ತಿ ವಿಚಾರವಾಗಿ ಇವರ ನಡುವೆ ನಿರಂತರವಾಗಿ ಕಲಹ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಇತ್ತೀಚೆಗೆ ದರಿಯಪ್ಪ ಮನೆಗೆ ಸುಮಾರು 2 ಲಕ್ಷ ರೂಪಾಯಿ ಹಣ ತಂದಿದ್ದನು. ಈ ಹಣವನ್ನು ತನ್ನ ಅಣ್ಣನಿಗೆ ನೀಡಬೇಕು ಎಂದು ಕಾವ್ಯಾ ಒತ್ತಾಯಿಸಿದ್ದಾಳೆ. ಇದೇ ವಿಚಾರವಾಗಿ ಗುರುವಾರ ಬೆಳಿಗ್ಗೆ ಇಬ್ಬರ ನಡುವೆ ತೀವ್ರ ವಾಗ್ವಾದ ಉಂಟಾಗಿದೆ.
ಈ ವೇಳೆ ಆಕ್ರೋಶಗೊಂಡ ದರಿಯಪ್ಪ, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಕಾವ್ಯಾ ಕೆಳಗೆ ಬಿದ್ದಾಗ, ಆಕೆಯ ಕುತ್ತಿಗೆಯ ಮೇಲೆ ಕಾಲಿಟ್ಟು ಬಲವಾಗಿ ತುಳಿದಿದ್ದಾನೆ. ಪರಿಣಾಮವಾಗಿ ಉಸಿರುಗಟ್ಟಿಕೆ ಹಾಗೂ ತೀವ್ರ ಗಾಯಗಳಿಂದ ಕಾವ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೀಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
