ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಖಾಸಗಿ ವೇರ್‌ಹೌಸ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯ ಬಳಿಗೆ ಸಹಾಯ ಮಾಡುವ ನೆಪದಲ್ಲಿ ಬಂದ ಪುರುಷ ಸಹೋದ್ಯೋಗಿ, ಆಕೆಗೆ ಲಿಪ್ ಕಿಸ್ ನೀಡಲು ಯತ್ನಿಸಿದ್ದಾನೆ.

ಈ ಘಟನೆ ಕಚೇರಿಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ನಂತರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಗಮನಕ್ಕೆ ಬಂದ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತುಡಿಯಲೂರು ಪ್ರದೇಶದಲ್ಲಿರುವ ಈ ಕಚೇರಿಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ಪುರುಷ ಉದ್ಯೋಗಿ ಆಕೆಯ ಬಳಿಗೆ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಆರಂಭದಲ್ಲಿ ಆತನ ಉದ್ದೇಶ ಅರಿಯದ ಮಹಿಳೆ, ಆತ ಮುಖದ ಹತ್ತಿರ ಬಂದು ಕಿಸ್ ಮಾಡಲು ಯತ್ನಿಸಿದಾಗ ಎಚ್ಚೆತ್ತುಕೊಂಡು ತಕ್ಷಣವೇ ಅವನನ್ನು ತಳ್ಳಿ ದೂರ ಸರಿದಳು. ಬಳಿಕ ಕೋಪದಿಂದ ಎಚ್ಚರಿಕೆ ನೀಡಿದಳು.

ಘಟನೆಯ ನಂತರ ವಿಷಯವನ್ನು ಬಹಿರಂಗಪಡಿಸದಂತೆ ಆರೋಪಿಯು ಮನವಿ ಮಾಡಿದರೂ, ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ 28 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ.

ಮಹಿಳೆಯರ ಮೇಲೆ ಕೆಲಸದ ಸ್ಥಳಗಳಲ್ಲಿ ನಡೆಯುವ ಕಿರುಕುಳವನ್ನು ತಡೆಯಲು POSH ಕಾಯ್ದೆ ಜಾರಿಯಲ್ಲಿದ್ದರೂ, ಇಂತಹ ಘಟನೆಗಳು ಮುಂದುವರಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

Related News

error: Content is protected !!