ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಘಟನೆ ಸಂಚಲನ ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಪ್ರೊಫೆಸರ್ ಅಬ್ದುಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತರಗತಿ ನಡೆಯುತ್ತಿದ್ದ ವೇಳೆ ವೇದಿಕೆಯ ಮೇಲೆ ಮೈಕ್ ಹಿಡಿದು ನಿಂತಿದ್ದ ಅಬ್ದುಲ್, ವಿದ್ಯಾರ್ಥಿನಿಯೊಬ್ಬಳಿಗೆ ಚಾಕೋಲೆಟ್ ನೀಡಿ ಪ್ರಪೋಸ್ ಮಾಡಿದ್ದಾನೆ. ಈ ನಡೆಗೆ ಆ ವಿದ್ಯಾರ್ಥಿನಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರಶ್ನಿಸಿದ್ದಾಳೆ. ಇದಕ್ಕೆ ಪ್ರತಿಯಾಗಿ, ಆಕೆ ಮೊದಲೇ ತನ್ನ ಚೇಂಬರ್‌ಗೆ ಬಂದು ಪ್ರಪೋಸ್ ಮಾಡಿದ್ದಳು ಎಂದು ಎಲ್ಲರ ಮುಂದೆಯೇ ಹೇಳಿಕೊಂಡು, ತನ್ನ ಬಳಿ ಸಿಸಿಟಿವಿ ಸಾಕ್ಷ್ಯ ಇದೆ ಎಂದು ಅಬ್ದುಲ್ ವಾದಿಸಿದ್ದಾನೆ.

ಈ ಘಟನೆ ಬಳಿಕ ವಿದ್ಯಾರ್ಥಿನಿ ಪ್ರಿನ್ಸಿಪಾಲ್‌ಗೆ ದೂರು ನೀಡುವುದಾಗಿ ಹೇಳಿ ವಿರೋಧ ವ್ಯಕ್ತಪಡಿಸಿದ್ದಾಳೆ. ಕಾಲೇಜು ಆಡಳಿತ ಮಂಡಳಿ ಕೂಡ ತಕ್ಷಣವೇ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದೆ. ಅದರ ಆಧಾರದ ಮೇಲೆ ಕ್ರೈಂ ನಂ. 79 ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 74, 75 ಮತ್ತು 329(3) ಅಡಿಯಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದೇ ರೀತಿಯ ವರ್ತನೆಗಾಗಿ ಅಬ್ದುಲ್ ವಿರುದ್ಧ ಈ ಹಿಂದೆ ಕೂಡ ಆರೋಪಗಳು ಕೇಳಿಬಂದಿದ್ದು, ತುಮಕೂರು ಕಾಲೇಜಿನಿಂದ ಅವರನ್ನು ಹೊರಹಾಕಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಮತ್ತೆ ಇಂತಹ ಕೃತ್ಯ ಎಸಗಿದ ಕಾರಣ ವಿದ್ಯಾರ್ಥಿಗಳು ಆಕ್ರೋಶಗೊಂಡು ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

error: Content is protected !!