ಭಾರತೀಯ ಸಶಸ್ತ್ರ ಪಡೆಗಳ ಪ್ರಮುಖ ಘಟಕವಾದ ಭಾರತೀಯ ನೌಕಾಪಡೆಯು 2027ರ ಜನವರಿ ಮತ್ತು ಫೆಬ್ರವರಿ ಬ್ಯಾಚ್ಗಳಿಗಾಗಿ ‘ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್ಮೆಂಟ್ (SSR)’ ಹುದ್ದೆಗಳ ಅಧಿಸೂಚನೆ ಪ್ರಕಟಿಸಿದೆ. ದೇಶದಾದ್ಯಂತ ಇರುವ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತರು ಏಪ್ರಿಲ್ 6ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಹತೆ ಮತ್ತು ವಯೋಮಿತಿ:
ಅಭ್ಯರ್ಥಿಗಳು ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದಲ್ಲದೆ, ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ವಿಭಾಗದಲ್ಲಿ ಡಿಪ್ಲೊಮಾ ಅಥವಾ ವೃತ್ತಿಪರ ಕೋರ್ಸ್ ಪೂರ್ಣಗೊಳಿಸಿದವರಿಗೂ ಅವಕಾಶ ಇದೆ. ಜನವರಿ 2027 ಬ್ಯಾಚ್ಗೆ ಡಿಸೆಂಬರ್ 2004 ರಿಂದ ಮೇ 2009ರ ನಡುವೆ ಜನಿಸಿದವರು ಹಾಗೂ ಫೆಬ್ರವರಿ 2027 ಬ್ಯಾಚ್ಗೆ ಮೇ 2005 ರಿಂದ ಅಕ್ಟೋಬರ್ 2009ರ ನಡುವೆ ಜನಿಸಿದವರು ಅರ್ಹರಾಗಿರುತ್ತಾರೆ.
ಆಯ್ಕೆ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲಿಗೆ ಮೇ ತಿಂಗಳಲ್ಲಿ ನಡೆಯುವ ಭಾರತೀಯ ನೌಕಾಪಡೆಯ ಪ್ರವೇಶ ಪರೀಕ್ಷೆ (INET) ನಡೆಯಲಿದೆ. ಇದು 100 ಅಂಕಗಳ ಲಿಖಿತ ಪರೀಕ್ಷೆಯಾಗಿದ್ದು, ಇಂಗ್ಲಿಷ್, ವಿಜ್ಞಾನ, ಗಣಿತ ಮತ್ತು ಸಾಮಾನ್ಯ ಜ್ಞಾನ ವಿಷಯಗಳಿಂದ ಪ್ರಶ್ನೆಗಳು ಕೇಳಲಾಗುತ್ತವೆ. ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಂತಿಮ ಆಯ್ಕೆ ನಡೆಯುತ್ತದೆ.
ತರಬೇತಿ ಮತ್ತು ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಡಿಶಾದ INS ಚಿಲ್ಕಾದಲ್ಲಿ ತರಬೇತಿ ನೀಡಲಾಗುತ್ತದೆ. ಆರಂಭಿಕವಾಗಿ ತಿಂಗಳಿಗೆ ₹30,000 ಸಂಬಳ ನೀಡಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತದೆ. ಸಂಬಳದ ಒಂದು ಭಾಗವನ್ನು ‘ಅಗ್ನಿವೀರ್ ಕಾರ್ಪ್ಸ್ ನಿಧಿ’ಗೆ ಮೀಸಲಿಡಲಾಗುತ್ತದೆ. ನಾಲ್ಕು ವರ್ಷಗಳ ಸೇವೆಯ ಬಳಿಕ ‘ಸೇವಾ ನಿಧಿ’ ಯೋಜನೆಯಡಿ ಸುಮಾರು ₹10.04 ಲಕ್ಷ ರೂ.ಗಳ ಮೊತ್ತ ನೀಡಲಾಗುತ್ತದೆ.
