ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತನ್ನ ನೌಕರರ ಕುಟುಂಬಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿದೆ. ಅನುಕಂಪದ ಆಧಾರದ ಮೇಲೆ ನೀಡುವ ಉದ್ಯೋಗ ನೇಮಕಾತಿ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಮೃತ ನೌಕರರ ವಿವಾಹಿತ, ವಿಚ್ಛೇದಿತ ಅಥವಾ ವಿಧವೆ ಮಗಳು ಹಾಗೂ ಸಹೋದರಿಯರೂ ಸಹ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಇದುವರೆಗೆ ಅನುಕಂಪದ ನೇಮಕಾತಿಗೆ ಕೆಲವು ನಿರ್ಬಂಧಗಳು ಇದ್ದವು. ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಅವಕಾಶ ಸೀಮಿತವಾಗಿತ್ತು. ಆದರೆ ನಿಗಮ ಹೊರಡಿಸಿರುವ ಹೊಸ ಸುತ್ತೋಲೆಯ ಪ್ರಕಾರ, ಮೃತ ನೌಕರರನ್ನು ಅವಲಂಬಿಸಿದ್ದ ಮಗಳು ಅಥವಾ ಸಹೋದರಿ ವಿವಾಹಿತರಾಗಿದ್ದರೂ ಅವರಿಗೆ ಉದ್ಯೋಗ ನೀಡಲು ಅವಕಾಶ ಮಾಡಿಕೊಡಲಾಗಿದೆ.

ಅರ್ಹತೆ ಏನು?
ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸುವವರು ಮೃತ ನೌಕರರು ಜೀವಂತವಾಗಿದ್ದಾಗ ಅವರ ಮೇಲೆಯೇ ಅವಲಂಬಿತರಾಗಿದ್ದು, ಅವರ ಜೊತೆಯೇ ವಾಸವಾಗಿದ್ದರು ಎಂಬುದನ್ನು ಸಾಬೀತುಪಡಿಸಬೇಕು. ಇದಕ್ಕಾಗಿ ಸಂಬಂಧಿಸಿದ ತಹಶೀಲ್ದಾರರಿಂದ ವಾಸಸ್ಥಳ ಮತ್ತು ಅವಲಂಬಿತತ್ವದ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಯಾರಿಗೆ ಅನ್ವಯ?
ಮೃತ ನೌಕರನ ಅವಲಂಬಿತ ಅವಿವಾಹಿತ, ವಿವಾಹಿತ, ವಿಚ್ಛೇದಿತ ಅಥವಾ ವಿಧವೆ ಮಗಳು ಮತ್ತು ಸಹೋದರಿಯರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ ಅವರು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಸಂಕಷ್ಟದಲ್ಲಿರುವ ನೌಕರರ ಕುಟುಂಬಗಳಿಗೆ ಈ ನಿರ್ಧಾರವು ಮಹತ್ವದ ನೆರವಾಗಲಿದೆ.

Related News

error: Content is protected !!