ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ ,ಕೆಮ್ಮು, ನೆಗಡಿ, ಕಂಡು ಬಂದರೆ ಸಾಕು ತಕ್ಷಣ ತೆರಳಿ ಚುಚ್ಚು ಮದ್ದು ಮತ್ತು ಮಾತ್ರೆಗಳನ್ನು ಪಡೆದುಕೊಂಡು ವೈದ್ಯರ ಸಲಹೆಯಂತೆ ಕೂಡಲೇ ಗುಣಮುಖರಾಗಿ ಯಥಾಸ್ಥಿತಿ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಗ್ರಾಮೀಣ ಭಾಗದ ಜನ. ಆದರೆ ಕಳೆದ ಹಲವಾರು ದಿನಗಳಿಂದ ಆಸ್ಪತ್ರೆಯ ಸುತ್ತ ಎತ್ತ ನೋಡಿದರು ಒಬ್ಬ ರೋಗಿಯು ಕೂಡ ಕಂಡು ಬರುತ್ತಿಲ್ಲ. ಬೆಳಗಾಗುವುದೇ ತಡ ರೋಗಿಗಳ ಗದ್ದಲದಿಂದ ಗಿಜಿ ಗುಡುತ್ತಿದ್ದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರ ಸಿಡಿಲು ಬಡಿದಂತಾಗಿ ಸ್ಮಶಾನ ದಂತೆ ಕಗ್ಗತ್ತಲು ಆವರಿಸಿ ನಿಶಬ್ದವಾಗಿದೆ.
ಹಾಗಾದ್ರೆ ಅಂತಹ ಸರ್ಕಾರಿ ಆಸ್ಪತ್ರೆ ಯಾವುದು ಅಂತೀರಾ…! ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ, ಮೈಸೂರಿನ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡವಿದ್ದು ಕಳೆದ ಆರೇಳು ವರ್ಷಗಳಿಂದ ಬಡವರ ಪಾಲಿನ ಸಂಜೀವಿನಿಯಂತೆ ಕಾರ್ಯನಿರ್ವಹಿಸಿಕೊಂಡು ಬರುತ್ತಿತ್ತು. ಉಚಿತವಾಗಿ ಸಿಗುವ ಚಿಕಿತ್ಸೆಗೆ ಅತಿ ಹೆಚ್ಚು ಬಡ ಜನರೇ ಈ ಆಸ್ಪತ್ರೆಗೆ ತಂಡೋಪ ತಂಡವಾಗಿ ಧಾವಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮೈಸೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹೆರಿಗೆಗಳಿಗೆ ಪ್ರಸಿದ್ಧಿ ಪಡೆದಿರುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮೊದಲ ಸ್ಥಾನವನ್ನು ಹುಲ್ಲಹಳ್ಳಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಅಲಂಕರಿಸಿ ಪ್ರಸಿದ್ಧಿ ಪಡೆದಿತ್ತು. ಗರ್ಭಿಣಿ, ಬಾಣಂತಿಯರು, ವೃದ್ದರು, ಮತ್ತು ವಿಕಲಚೇತನರು ಈ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಧಾವಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಪ್ರಮುಖವಾಗಿ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ಅರವಳಿಕೆ ತಜ್ಞರು ನುರಿತ ವೈದ್ಯರುಗಳಿಂದ ಕೂಡಿ ಆಸ್ಪತ್ರೆಗೆ ಧಾವಿಸುತ್ತಿದ್ದ ರೋಗಿಗಳಿಗೆ ಉತ್ತಮ ಚಿಕಿತ್ಸೆಗಳನ್ನು ನೀಡಿ ಪ್ರಸಿದ್ದಿ ಪಡೆದುಕೊಂಡಿದ್ದರು. ಕಳೆದ ಹಲವಾರು ತಿಂಗಳ ಹಿಂದೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಧಾರ ಸ್ತಂಭವಾಗಿದ್ದ ಈ ಮೂವರು ಪ್ರಮುಖ ವೈದ್ಯರು ದಿಢೀರನೆ ವರ್ಗಾವಣೆಯಾಗಿರುವ ಹಿನ್ನೆಲೆ ಬಡ ರೋಗಿಗಳಿಗೆ ದೊಡ್ಡ ಅಘಾತವೇ ಎದುರಾಗಿದೆ. ಈಗ 30 ಹಾಸಿಗೆ ಉಳ್ಳ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯರಿಲ್ಲದೆ ಬಣಗುಡುತ್ತಿದೆ. ಸರ್ಕಾರಿ ಆಸ್ಪತ್ರೆಯನ್ನೇ ನಂಬಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬಡ ರೋಗಿಗಳ ಜೇಬಿನಲ್ಲಿ ಕಾಸಿಲ್ಲದೆ ಖಾಸಗಿ ಆಸ್ಪತ್ರೆಗಳ ಕದತಟ್ಟಲು ಹಿಂದೆಟು ಹಾಕುತ್ತಿದ್ದಾರೆ.
ಗರ್ಭಿಣಿ ,ಬಾಣತಿಯರು ,ವೃದ್ಧರು, ಈಗ ಸರ್ಕಾರಿ ಆಸ್ಪತ್ರೆಯ ಸೌಲಭ್ಯವಿಲ್ಲದೆ ಅತಂತ್ರಕ್ಕೆ ಸಿಲುಕಿದ್ದಾರೆ.ಕೂಡಲೇ ಸರ್ಕಾರ ಹಾಗು ಶಾಸಕ ದರ್ಶನ್ ಧ್ರುವನಾರಾಯಣ್ ಈ ಆಸ್ಪತ್ರೆಗೆ ಸರಿಯಾದ ಸರ್ಜರಿ ನಡೆಸುವ ಮೂಲಕ ಹಿಂದಿನ ಸ್ಥಿತಿಗೆ ತರುವರೆ ಎಂಬುದನ್ನು ಕಾದು ನೋಡಬೇಕಿದೆ…?

Leave a Reply

Your email address will not be published. Required fields are marked *

Related News

error: Content is protected !!