
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ ವಾಸಿಸುತ್ತಿದ್ದ ಅರ್ಚನಾ ಎಂಬ ಮಹಿಳೆ, ನಿರಂತರ ಕಿರುಕುಳಕ್ಕೆ ತಾಳಲಾರದೆ ಎರಡು ಅಂತಸ್ತಿನ ಮನೆಯ ಟೆರೇಸ್ ಯಿಂದ ಕೆಳಗೆ ಹಾರಿರುವ ಘಟನೆ ಬೆಳಕಿಗೆ ಬಂದಿದೆ.
ಮಹಿಳೆ ತಾರಸಿಯ ಅಂಚಿನಲ್ಲಿ ನಿಂತಿರುವಾಗ, ಆಕೆಯ ಅತ್ತೆ-ಮಾವಂದಿರು “ಹಾರಿ ಬಿಡು” ಎಂದು ಒತ್ತಾಯಿಸುತ್ತಿರುವ ದೃಶ್ಯಗಳು ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಸೆರೆಯಾಗಿ, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮಕ್ಕಳ ಎದುರೇ ನಡೆದ ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.
ಅರ್ಚನಾ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಘಟನೆಯ ಬಳಿಕವೂ ಆಕೆಯ ಕುಟುಂಬಸ್ಥರು ಮಹಿಳೆಯನ್ನು ಹಿಂಸಿಸುತ್ತಿರುವ ವಿಡಿಯೋ ಕೂಡಾ ವೈರಲ್ ಆಗಿದ್ದು, ವರದಕ್ಷಿಣೆ ಕಿರುಕುಳದ ಗಂಭೀರತೆ ಮತ್ತೆ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ವರದಕ್ಷಿಣೆ ಬೇಡಿಕೆ ಹಾಗೂ ಕುಟುಂಬದ ಹಿಂಸೆ ಕುರಿತಾಗಿ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.