ಬೆಂಗಳೂರು: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ 52 ವರ್ಷದ ಮಹಿಳೆಯ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ತನ್ನ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಪಡಿಸಬೇಕೆಂದು ಮಹಿಳೆ ಮನವಿ ಸಲ್ಲಿಸಿದ್ದರೂ, ನ್ಯಾಯಾಲಯವು ಆ ವಾದವನ್ನು ಅಂಗೀಕರಿಸಲಿಲ್ಲ.

ಮಹಿಳೆಯ ಪರವಾಗಿ ವಾದಿಸಿದ ವಕೀಲರು, “ಘಟನೆ ನಡೆದದ್ದು ನಾಲ್ಕು ವರ್ಷಗಳ ಹಿಂದೆ. ಮಹಿಳೆ ಬಾಲಕನ ಮೇಲೆ ಅತ್ಯಾಚಾರ ಎಸಗುವುದು ಸಾಧ್ಯವಿಲ್ಲ. ಜೊತೆಗೆ, ಪೋಕ್ಸೋ ಕಾಯಿದೆ ಮಹಿಳೆಯರಿಗೆ ಅನ್ವಯಿಸುವುದಿಲ್ಲ” ಎಂದು ಮನವಿ ಮಾಡಿದ್ದರು. ಆದರೆ, ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಈ ಎಲ್ಲ ವಾದಗಳನ್ನು ತಳ್ಳಿಹಾಕಿದೆ.

ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಪೋಕ್ಸೋ ಕಾಯಿದೆಯ ಉದ್ದೇಶ ಲಿಂಗಭೇದವಿಲ್ಲದೆ ಎಲ್ಲಾ ಮಕ್ಕಳ ಬಾಲ್ಯ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವುದಾಗಿದೆ ಎಂದು ಸ್ಪಷ್ಟಪಡಿಸಿದೆ. ದೌರ್ಜನ್ಯ ನಡೆದಿರುವುದಕ್ಕೆ ಸಂಬಂಧಿಸಿದಂತೆ ಸೆಕ್ಷನ್ 3, 4, 5 ಹಾಗೂ 6 ಅಡಿಯಲ್ಲಿ ಪ್ರಕರಣ ಶಿಕ್ಷಾರ್ಹವಾಗಿದ್ದು, “ನಾಲ್ಕು ವರ್ಷಗಳ ನಂತರ ದೂರು ದಾಖಲಿಸಲಾಗಿದೆ ಎಂಬುದು ಪ್ರಕರಣವನ್ನು ರದ್ದುಪಡಿಸಲು ಕಾರಣವಾಗಲಾರದು” ಎಂದು ಅಭಿಪ್ರಾಯಪಟ್ಟಿದೆ.

ಮಹಿಳೆಯ ಪರ ವಕೀಲರು, “ಆರೋಪಿ ಮತ್ತು ದೂರುದಾರರ ಕುಟುಂಬಗಳ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು. ಪಡೆದ ಹಣ ಹಿಂತಿರುಗಿಸಲಾಗದ ಕಾರಣದಿಂದ ದೂರು ನೀಡಲಾಗಿದೆ” ಎಂದು ವಾದಿಸಿದರೂ, ನ್ಯಾಯಾಲಯ ಅದನ್ನೂ ತಿರಸ್ಕರಿಸಿದೆ. ಅಲ್ಲದೇ, “ಬಾಲಕ ಮಾನಸಿಕ ಆಘಾತದಿಂದ ನಾಲ್ಕು ವರ್ಷಗಳ ನಂತರವೇ ದೂರು ನೀಡಿದ” ಎಂಬ ವಿಷಯಕ್ಕೆ ಸಹ ಸಾಕ್ಷ್ಯಾಧಾರವಿಲ್ಲ ಎಂದು ತಿಳಿಸಿದೆ.

ಹೀಗಾಗಿ, ಮಹಿಳೆ ವಿರುದ್ಧದ ಪ್ರಕರಣದಲ್ಲಿ ಶಿಕ್ಷಾರ್ಹ ಅಂಶಗಳು ಸ್ಪಷ್ಟವಾಗಿವೆ ಎಂದು ಹೇಳಿ, ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

error: Content is protected !!