
ಚಾಮರಾಜನಗರ : ಕಿವಿ ಚುಚ್ಚಿಸುವಾಗ ಶಿಶುವೊಂದು ಮೃತಪಟ್ಟಿದ್ದ ಆಘಾತಕಾರಿ ಘಟನೆ ಇದೀಗ ಬೆಳಕಿಗೆ ಬಂದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಆನಂದ್-ಮಾನಸ ದಂಪತಿಯ ಐದು ತಿಂಗಳ ಮಗುವಾದ ಪ್ರಖ್ಯಾತ್ ಈ ದುರ್ಘಟನೆಯ ಬಲಿಯಾಗಿದ್ದಾನೆ.
ಆರು ತಿಂಗಳ ಹಿಂದೆ ಪೋಷಕರು ಮಗುವಿನ ಕಿವಿ ಚುಚ್ಚಿಸಲು ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಕಿವಿ ಚುಚ್ಚುವ ವೇಳೆ ನೋವಾಗಬಾರದೆಂದು ವೈದ್ಯರು ಎರಡೂ ಕಿವಿಗಳಿಗೆ ಅನಸ್ತೇಷಿಯಾ ನೀಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಮಗುವಿನ ಬಾಯಲ್ಲಿ ನೊರೆ ಬಂದು, ಶ್ವಾಸಕೋಶ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣವೇ ಮಗು ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಸಾವನ್ನೇ ದೃಢಪಡಿಸಿದ್ದರು.
ಇದೀಗ 6 ತಿಂಗಳ ಬಳಿಕ ಹೊರಬಂದ ಮರಣೋತ್ತರ ಪರೀಕ್ಷಾ ವರದಿ ಪ್ರಕರಣಕ್ಕೆ ತೀವ್ರ ತಿರುವು ನೀಡಿದೆ. ವರದಿಯ ಪ್ರಕಾರ, ಕಿವಿ ಚುಚ್ಚುವ ಮೊದಲು ನೀಡಿದ ಅನಸ್ತೇಷಿಯಾಗೆ ಮಗು ಪ್ರತಿಕ್ರಿಯಿಸಿದ್ದು, ಶ್ವಾಸಕೋಶ ಹಾಗೂ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದೇ ಸಾವಿಗೆ ಕಾರಣವಾಗಿದೆ ಎಂದು ಸ್ಪಷ್ಟವಾಗಿದೆ.
ತಮ್ಮ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅನಸ್ತೇಷಿಯಾ ನೀಡಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನಮ್ಮ ಮಗುವಿನ ಸಾವು ವ್ಯರ್ಥವಾಗಬಾರದು” ಎಂದು ಬೇಡಿಕೆ ಇಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ, ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಅನುಸರಿಸಲಾಗುವ ಚಿಕಿತ್ಸೆ ವಿಧಾನಗಳ ಬಗ್ಗೆ ಗಂಭೀರ ಚರ್ಚೆ ಏರಿಕೆಯಾಗಿದೆ.