ಕೊಟ್ಟೂರು: ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಬಯಲು ಪ್ರದೇಶದಲ್ಲಿ ಬಿಡಾರ ಹೂಡಿದ್ದ ಹೆಳವರನ್ನು ಗ್ರಾಮಸ್ಥರು ಊರಿನಿಂದ ಹೊರ ಹಾಕಿದ ಅಪರೂಪದ, ಅಮಾನವೀಯ ಘಟನೆ ಇದೀಗ ಬೆಳಕಿಗೆ ಬಂದಿದೆ.
ಪ್ರತಿ ವರ್ಷದಂತೆ ತಮ್ಮ ವೃತ್ತಿಗೆ ಅನುಕೂಲವಾಗುವ ಸ್ಥಳದಲ್ಲಿ ಹೆಳವರು ಬಿಡಾರ ಹಾಕುವುದು ಸರ್ವೇಸಾಮಾನ್ಯವಾಗಿದೆ. ಆದರೆ ಇವರ ಆಗಮನದಿಂದ ಊರಿಗೆ ಮಳೆ ಹೋಯಿತೆಂಬ ಕೆಲವು ಹಿರಿಯರು ಹಾಗೂ ಕಿಡಿಗೇಡಿಗಳ ಊಹಾಪೋಹ ಮಾತಿಗೆ ಕಿವಿಗೊಟ್ಟು ಊರನ್ನು ಬಿಡಿಸಿದ್ದಾರೆ. ಜನರ ನಂಬಿಕೆಗೆ ಬೆಲೆಕೊಟ್ಟು, ಬೇಸರದಿಂದ ಅವರೂ ಹೊರ ನಡೆದು ಈಗ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನೆಲೆಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.

ಹೆಳವ ಇದೊಂದು ಅಲೆಮಾರಿ ಜನಾಂಗವಾಗಿದ್ದು, ಅಂದರೆ ಅವರು ಮನೆಮನೆಗೆ ಹೋಗಿ ಜನರ ವಂಶಾವಳಿಗಳನ್ನು ದಾಖಲಿಸುತ್ತಾರೆ ಮತ್ತು ಹೇಳುತ್ತಾರೆ. ಇದರಿಂದಾಗಿ ಬರುವ ನಗದು, ದವಸ ಧಾನ್ಯಗಳು, ಹಳೆಯ ಕಂಚು, ತಾಮ್ರದ ಪಾತ್ರೆಗಳು, ದನ ಕರುಗಳು, ಕುರಿಮರಿಗಳನ್ನು ದಾನವಾಗಿ ಪಡೆದು ಬದುಕು ಸಾಗಿಸುತ್ತಾರೆ.

ಈ ಆಧುನಿಕ ಕಾಲದಲ್ಲೂ ಜನರು ಮೌಢ್ಯದಿಂದ ಹೊರ ಬರಲಾಗಿಲ್ಲ ಎಂಬುದೇ ನಾಚಿಕೆಗೇಡಿನ ವಿಷಯವಾಗಿದೆ. ಇನ್ನಾದರೂ ಪ್ರಜ್ಞಾವಂತ ನಾಗರೀಕರು ಹಾಗೂ ಯುವಜನತೆ ಎಚ್ಚೆತ್ತುಕೊಂಡು ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ.
ವರದಿ:- ಮಣಿಕಂಠ. ಬಿ

error: Content is protected !!